ಜಮು,ಸೆ.14- ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಕಿಶ್ತವಾರ್ ಜಿಲ್ಲೆಯಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಕಿರಿಯ ಸೇನಾಧಿಕಾರಿ ಭದ್ರತಾಪಡೆ ಸಿಬ್ಬಂದಿ ಸೇರಿ ಇಬ್ಬರು ಹುತಾತರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಕಿಶ್ತವಾರ್ಗೆ ಸಂಪರ್ಕಿಸುವ ನೈದ್ಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದು, ನಾಲ್ವರು ಸೇನಾ ಸಿಬ್ಬಂದಿಗಳು ಗಾಯಗೊಂಡಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ ನೈದ್ ಸುಬೆದಾರ್, ವಿಫುನ್ಕುಮಾರ್ ಮತ್ತು ಯೋಧ ಅರವಿಂದ್ ಸಿಂಗ್ ವೀರ ಮರಣವನ್ನಪ್ಪಿದ್ದಾರೆ.
ವೀರಮರಣವನ್ನು ಹೊಂದಿದ ಯೋಧರ ತ್ಯಾಗಕ್ಕೆ ಭದ್ರತಾ ಪಡೆ ವಂದನೆ ಸಲ್ಲಿಸಿದ್ದು, ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ ಎಂದು ಸೇನೆ ಹೇಳಿದೆ.ಇದಕ್ಕೂ ಮುನ್ನ ನಿನ್ನೆ 3.30ರ ಸುಮಾರಿಗೆ ನಡೆದ ಭಾರಿ ಪ್ರಮಾಣದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದು, ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಅವರನ್ನು ಹೆಲಿಕಾಪ್ಟರ್ ಮೂಲಕ ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಉದಂಪುರ್ ಜಿಲ್ಲೆಯ ಬಸಂತಗಡದಲ್ಲಿ ಭದ್ರತಾ ಕಾರ್ಯಾಚರಣೆ ನಡೆಸಿ ಜೈಶ್-ಎ-ಮಹಮದ್ ಭಯೋತ್ಪಾದನೆ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.