ಬೆಂಗಳೂರು, ನ.11- ಯುವ ಶಾಸಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಚುರುಕಾಗಿರುವ ಕಾಂಗ್ರೆಸ್ ಲಿಂಗಾಯಿತ ಮತಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಲಾರಂಭಿಸಿದೆ. ಬಿ.ಎಸ್.ಯಡಿ ಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಕ್ಕೆ ಪ್ರಾಯಶ್ಚಿತ ಅನುಭವಿಸಿದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಅನುಭವಿಸಿತ್ತು. ಪರಿಸ್ಥಿತಿಯ ಲಾಭ ಪಡೆದ ಕಾಂಗ್ರೆಸ್ ಬಿಜೆಪಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಸೆಳೆದುಕೊಂಡು ಕೇಸರಿ ಪಡೆಗೆ ಭಾರೀ ಪೆಟ್ಟು ನೀಡಿತ್ತು.
ಯಡಿಯೂರಪ್ಪನವರು ತಮಗೆ ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷ ಮುಖ್ಯ ಎಂಬ ಸಿದ್ಧಾಂತಕ್ಕೆ ಕಟಿ ಬದ್ಧರಾಗಿ, ತಮ್ಮ ವಯೋ ಸಹಜ ಆಯಾಸವನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಅದು ಅಷ್ಟು ಪರಿಣಾಮ ಬೀರಿರಲಿಲ್ಲ. ಬಿಜೆಪಿಯಲ್ಲಿರುವ ಹಲವು ಲಿಂಗಾಯಿತ ವೀರಶೈವ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದರು.
ಅವರನ್ನು ಸೆಳೆಯಲು ಕಾಂಗ್ರೆಸ್ ಕೂಡ ಗಾಳ ಹಾಕಿ ಕುಳಿತಿತ್ತು. ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ಕುಟುಂಬದ ಮೇಲೆ ಸಮುದಾಯದ ಅವ್ಯಕ್ತವಾದ ವಿಶ್ವಾಸ ಹೆಚ್ಚಾಗುವ ಸಾಧ್ಯತೆಗಳಿವೆ. ಇದು ಕಾಂಗ್ರೆಸ್ನ ಆಪರೆಷನ್ ಹಸ್ತಕ್ಕೆ ಅಡೆಯಾಗುವುದಲ್ಲದೆ, ಲಿಂಗಾಯಿತ ಸಮುದಾಯದ ವಿಶ್ವಾಸ ಗಳಿಸುವ ಕೈ ಪಡೆಯ ವೇಗಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ತಂತ್ರಗಾರಿಕೆಯನ್ನು ಬದಲಾವಣೆ ಮಾಡಲು ಮುಂದಾಗಿದೆ.
ನ.15ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣ
ಲಿಂಗಾಯಿತ ವೀರಶೈವ ಸಮುದಾಯ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ನವರಾದರೂ ಸಮುದಾಯದ ವಿಷಯ ಬಂದಾಗ ಮುಲ್ಲಾಜಿಲ್ಲದೆ ಮಾತನಾಡಿ ಮುಜುಗರ ಉಂಟು ಮಾಡುತ್ತಿದ್ದಾರೆ. ಪಕ್ಷದಲ್ಲೇ ಇರುವ ಎಂ.ಬಿ.ಪಾಟೀಲ್ ಲಿಂಗಾಯಿತ ವೀರಶೈವ ನಾಯಕರಾಗುವ ಅವಕಾಶಗಳಿದ್ದಾಗ್ಯೂ ಏಕವ್ಯಕ್ತಿ ನಾಯಕತ್ವದ ಒಳೈಕೆಗೆ ಹೆಚ್ಚಿನ ಸಮಯ ಕಳೆಯುವ ಮೂಲಕ, ಹತ್ತರಲ್ಲಿ ಹನ್ನೊಂದನೆ ನಾಯಕರಾಗಿ ಉಳಿದು ಹೋಗಿದ್ದಾರೆ. ಈಶ್ವರ್ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಬಸವರಾಜ ರಾಯರೆಡ್ಡಿ ಸೇರಿದಂತೆ ಇತರ ನಾಯಕರು ಪ್ರಾದೇಶಿಕವಾಗಿ ಸೀಮಿತವಾಗಿದ್ದಾರೆ.
ಹೀಗಾಗಿ ಕಾಂಗ್ರೆಸ್ ವಲಸಿಗರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರಿಗೆ ಹೆಚ್ಚು ಮಣೆ ಹಾಕಿ ಹೊಸ ನಾಯಕತ್ವ ಬೆಳೆಸಲು ಚಿಂತನೆ ನಡೆಸಿದೆ.ವಿಜಯೇಂದ್ರ ಈ ಮೊದಲು ಹಲವು ಬಾರಿ ಕಾಂಗ್ರೆಸ್ಗೆ ಟಕ್ಕರ್ ನೀಡಿ ಸೋಲಿನ ರುಚಿ ಉಣಿಸಿದ್ದಾರೆ. ಈಗ ಅವರ ಬೆನ್ನಿಗೆ ಅಗಾಧ ಶಕ್ತಿಯಾಗಿ ಬಿ.ಎಸ್.ಯಡಿಯೂರಪ್ಪ ಸರ್ವ ಪ್ರಮಾಣದಲ್ಲೂ ಇರುವುದು ಕಾಂಗ್ರೆಸ್ಗೆ ಹೊಸ ಸವಾಲಾಗಿ ಪರಿಣಮಿಸಿದೆ. ಲೋಕಸಭೆ ಚುನಾವಣೆವರೆಗೂ ಲಿಂಗಾಯಿತ ವೀರಶೈವ ಸಮುದಾಯವನ್ನು ಕಾಯ್ದಿಟ್ಟುಕೊಳ್ಳಲು ಕಾಂಗ್ರೆಸ್ ನಡೆಸುತ್ತಿದ್ದ ಹೋರಾಟ ಹಿಮ್ಮುಖವಾಗುವ ಸಾಧ್ಯತೆ ಇದೆ. ಲಿಂಗಾಯಿತ ಸಮುದಾಯದ ಮತಗಳು ಒಂದು ಕಡೆ ಗಟ್ಟಿಗೊಳ್ಳುವ ನಿರೀಕ್ಷೆಗಳಿರುವುದರಿಂದ ಕಾಂಗ್ರೆಸ್ ಉಳಿದ ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ, ಅಲ್ಪಸಂಖ್ಯಾತ ಮತಗಳನ್ನು ಕೇಂದ್ರೀಕರಿಸುವ ಲೆಕ್ಕಾಚಾರದಲ್ಲಿದೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜು ಆಯೋಗದ ವರದಿಗೆ ಒಕ್ಕಲಿಗ ಹಾಗೂ ಲಿಂಗಾಯಿತ ವೀರಶೈವ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತ ಪಡಿಸುತ್ತಿವೆ. ಮನೆಯಲ್ಲೆ ಕುರಿತು ಸಮೀಕ್ಷಾ ವರದಿ ಬರೆಯಲಾಗಿದೆ. ಅದನ್ನು ಅಂಗೀಕರಿಸಬಾರದು, ಮರು ಸಮೀಕ್ಷೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಈಗಾಗಲೇ ಶಾಮನೂರು ಶಿವಶಂಕರಪ್ಪ ಪ್ರಕಟಿಸಿದ್ದಾರೆ.
ಕಾಂತರಾಜು ವರದಿಯನ್ನು ಬೆಳಗಾವಿ ಅವೇಶನದಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಕಾಂಗ್ರೆಸ್ ಬಿಜೆಪಿಗೆ ಎದಿರೇಟು ಹಾಕಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ.