ಬೆಂಗಳೂರು,ಆ.27- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ರುವ ನಟ ದರ್ಶನ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ರಾಜೋಪಚಾರ ಮಾಡಿದ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಗೃಹಸಚಿವ ಡಾ.ಜಿ.ಪರ ಮೇಶ್ವರ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜೈಲಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ವರದಿ ನೀಡಿದ್ದಾರೆ. ಲೋಪದೋಷಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ಈಗಾಗಲೇ ಹಿರಿಯ ಅಧಿಕಾರಿಗಳು ಸೇರಿದಂತೆ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಜೊತೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ. ಈ ವೇಳೆ ನ್ಯಾಯಾಲಯದ ಪೂರ್ವಾನುಮತಿ ಪಡೆದು ದರ್ಶನ್ನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಪ್ರಕ್ರಿಯೆಗಳು ಮುಗಿದ ನಂತರ ನಟ ದರ್ಶನ್ ಅವರನ್ನು ಬಳ್ಳಾರಿಯ ಕಾರಾಗೃಹ ಅಥವಾ ಬೆಳಗಾಂನ ಹಿಂಡಲಗ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಪರಪ್ಪನ ಅಗ್ರಹಾರ ಅಷ್ಟೇ ಅಲ್ಲದೆ ಹಲವು ಜೈಲುಗಳಲ್ಲಿ ವಿವಿಐಪಿ ಹಾಗೂ ಪ್ರಭಾವಿ ಕೈದಿಗಳಿಗೆ ರಾಜೋಪಚಾರ ನೀಡುತ್ತಿರುವುದು , ಮೊಬೈಲ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಂಡುಬಂದಿದೆ.
ಈ ಹಿನ್ನಲೆಯಲ್ಲಿ ಬಂಧಿಖಾನೆಗಳ ಸಮಗ್ರ ಸುಧಾರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪರಮೇಶ್ವರ್ ಅವರನೊಂದಿಗಿನ ಚರ್ಚೆಯ ಬಳಿಕ ಸಿದ್ದರಾಮಯ್ಯ, ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ಜೈಲಿನ ವ್ಯವಸ್ಥೆಗಳ ಸುಧಾರಣೆಗಾಗಿ ಎಚ್.ಕೆ.ಪಾಟೀಲ್ನೇತೃತ್ವದ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಅದರ ಕುರಿತು ಮುಖ್ಯಮಂತ್ರಿ ಇಂದು ವರದಿ ಪಡೆದಿದ್ದು, ಬಂಧಿಖಾನೆಯ ಲೋಪದೋಷಗಳನ್ನು ಸರಿಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ಗೆ ಆತಿಥ್ಯ ನೀಡುತ್ತಿದ್ದು ಜೈಲಿನ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದಾನೆ. ನಾಗ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ದರ್ಶನ್ ಜೊತೆ ಇರುವ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ತನ್ನ ಹಿಂಬಾಲಕರ ಮೂಲಕ ಬಹಿರಂಗಪಡಿಸಬಹುದು ಎಂಬ ಶಂಕೆ ಇದೆ.
ಮತ್ತೊಂದು ಮಾಹಿತಿಯ ಪ್ರಕಾರ, ದರ್ಶನ್ಗೆ ನಾಗ ಹತ್ತಿರವಾಗಿರುವುದನ್ನು ಸಹಿಸಲಾಗದೆ ರಘು ಎಂಬ ಮತ್ತೊಬ್ಬ ರೌಡಿಯ ಗುಂಪು ಜೈಲಿನಲ್ಲಿ ದೊರೆಯುತ್ತಿರುವ ರಾಜಾತಿಥ್ಯದ ಮಾಹಿತಿಯನ್ನು ಹೊರಜಗತ್ತಿಗೆ ವಿವರಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.