Saturday, September 14, 2024
Homeರಾಜ್ಯಬಿಗಿ ಭದ್ರತೆ ನಡುವೆ ನಡೆದ ಗೆಜೆಟೆಡ್ ಪ್ರಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ

ಬಿಗಿ ಭದ್ರತೆ ನಡುವೆ ನಡೆದ ಗೆಜೆಟೆಡ್ ಪ್ರಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ

Recruitment examination for gazetted probationary posts held amid tight security

ಬೆಂಗಳೂರು,ಆ.27- ಕರ್ನಾಟಕ ಲೋಕಸೇವಾ ಆಯೋಗದ 384 ಗೆಜೆಟೆಡ್ ಪ್ರೊಬೆಷನರ್ರಸ ಹುದ್ದೆಗಳ ನೇಮಕಾತಿಗಾಗಿ ಇಂದು ರಾಜ್ಯಾದ್ಯಂತ ಏಕಕಾಲಕ್ಕೆ ಪರೀಕ್ಷೆ ನಡೆದಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕ ತಪಾಸಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲೂ ಈ ಮೊದಲು ಪಿಎಸ್ಐ ಹುದ್ದೆಗಳ ನೇಮಕಾತಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಕುಖ್ಯಾತವಾಗಿರುವ ಕಲಬುರಗಿ ಹಾಗೂ ಇತರ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದ್ದು, ನೊಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಲೋಹ ಪರಿಶೋಧಕ ಅಳವಡಿಸಲಾಗಿದ್ದು, ಸಂಬಂಧಪಟ್ಟ ಸಲಕರಣೆಗಳಿಂದ ತೀವ್ರ ತಪಾಸಣೆ ನಡೆಸಲಾಗಿದೆ.

ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಸೂಕ್ಷ್ಮ ಬ್ಲೂಟೂತ್ನಂತಹ ಡಿವೈಸ್ಗಳನ್ನು ಬಳಸಿ ಅಕ್ರಮ ನಡೆಸಬಹುದೆಂಬ ಕಾರಣಕ್ಕೆ ಪ್ರತಿಯೊಬ್ಬ ಅಭ್ಯರ್ಥಿಯ ಎರಡೂ ಕಿವಿಗಳನ್ನು ಬ್ಯಾಟರಿಯ ಬೆಳಕಿನಲ್ಲಿ ತಪಾಸಣೆ ನಡೆಸಲಾಯಿತು.

ಹೆಣ್ಣು ಮಕ್ಕಳಿಗೆ ಕಿವಿಯೊಲೆ, ಮೂಗುತಿ ಹಾಗೂ ಚಿನ್ನದ ಸರ ಧರಿಸದಂತೆ ಪರೀಕ್ಷಾ ಕೇಂದ್ರದ ಬಳಿ ಇದ್ದ ಧ್ವನಿವರ್ಧಕಗಳ ಮೂಲಕ ಸೂಚನೆ ನೀಡಲಾಗಿತ್ತು. ಕೆಲವರು ಬಹಳ ದಿನಗಳಿಂದ ಧರಿಸಿದ್ದ ಮೂಗುತಿ ಹಾಗೂ ಕಿವಿಯೋಲೆಗಳು ತಕ್ಷಣಕ್ಕೆ ಬಿಚ್ಚಲಾಗದೆ ಪರದಾಡಿದರು. ಅವುಗಳನ್ನು ಕತ್ತರಿಸಿ ತೆಗೆದಿರುವ ಉದಾಹರಣೆಗಳು ಇವೆ. ಕೆಲವರಿಗೆ ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದ ರಕ್ತ ಜಿನಿಗಿದ್ದು, ನೋವಿನಿಂದ ಅಳತ್ತಿರುವ ದೃಶ್ಯಗಳು ಕಂಡುಬಂದಿವೆ.

ಬೆಳಗಾವಿಯ ಅಂಜುಮನ್ ಕಾಲೇಜಿನಲ್ಲಿ ಓಎಂಆರ್ ಶೀಟ್ ಅದಲು ಬದಲು ಗೊಂಡಿದ್ದರಿಂದ ಗೊಂದಲ ಉಂಟಾಯಿತು. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಕೆಲವರು ಪ್ರತಿಭಟನೆ ನಡೆಸಿದರು.ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮೊಹಮದ್ ಮೋಸಿನ್, ಓಎಂಆರ್ ಶೀಟ್ನಲ್ಲಿ ಅದಲು ಬದಲು ಆಗಿರುವ ಗೊಂದಲವನ್ನು ಬಗೆಹರಿಸಿದರು. ಒಂದು ಗಂಟೆ ತಡವಾಗಿ ಪರೀಕ್ಷೆ ಆರಂಭವಾಯಿತು. ತಮಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ನೀಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದರು.

2017-18ರಲ್ಲಿ ಕೆಎಎಸ್ ಪರೀಕ್ಷೆ ನಡೆಸಲಾಗಿತ್ತು. ಆನಂತರ ಏಳು ವರ್ಷಗಳ ಬಳಿಕ 2024-25ನೇ ಸಾಲಿನ ಅಧಿಸೂಚನೆ ಹೊರಡಿಸಲಾಗಿದೆ. ಈ ಮೊದಲು ಲೋಕಸಭೆ ಚುನಾವಣೆ ಹಾಗೂ ಇತರೆ ಕಾರಣಗಳಿಂದಾಗಿ ಎರಡು ಬಾರಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಕಳೆದ ಜುಲೈನಲ್ಲಿ ಅಧಿಸೂಚನೆ ಹೊರಡಿಸಿ ಆ.27ಕ್ಕೆ ದಿನಾಂಕ ನಿಗದಿಪಡಿಸಿದಾಗ ಕೆಲವು ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು. 21ಕ್ಕೂ ಹೆಚ್ಚಿನ ವಿಷಯಗಳನ್ನು ಅಧ್ಯಯನ ಮಾಡಬೇಕಿದೆ. ಹೀಗಾಗಿ ಒಂದು ತಿಂಗಳ ಕಾಲಾವಕಾಶ ಸಾಲುವುದಿಲ್ಲ. ಕನಿಷ್ಟ ಮೂರು ತಿಂಗಳಿಗೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಇದಕ್ಕೆ ಸರ್ಕಾರ ಸೊಪ್ಪು ಹಾಕಲಿಲ್ಲ.

ಅಭ್ಯರ್ಥಿಗಳು ನಡೆಸಿದ ಹೋರಾಟಗಳಿಗೆ ತಿರುಗೇಟು ಕೊಟ್ಟ ಮುಖ್ಯಮಂತ್ರಿ ಸಚಿವಾಲಯ 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದಾರೆ. ಕೆಲವೇ ಕೆಲವರು ಮುಂದೂಡಿಕೆ ಬೇಡಿಕೆಯನ್ನಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿತ್ತು. ಕೊನೆಗೆ ಯಾವುದೇ ಒತ್ತಾಯಕ್ಕೆ ಮಣಿಯದೆ ನಿಗದಿತ ಸಮಯದಲ್ಲೇ ಇಂದು ಕೆಎಎಸ್ ಪರೀಕ್ಷೆ ನಡೆದಿದೆ.

RELATED ARTICLES

Latest News