Sunday, July 7, 2024
Homeರಾಷ್ಟ್ರೀಯಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಅಮೃತ್‌ಪಾಲ್‌ಸಿಂಗ್‌ಗೆ ಮೈಕ್‌ ಚಿಹ್ನೆ

ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಅಮೃತ್‌ಪಾಲ್‌ಸಿಂಗ್‌ಗೆ ಮೈಕ್‌ ಚಿಹ್ನೆ

ನವದೆಹಲಿ,ಮೇ.20– ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ ಅವರಿಗೆ ಮೈಕ್‌ ಚಿಹ್ನೆ ಲಭಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂ ಜೈಲಿನಲ್ಲಿರುವ ಸಿಂಗ್‌ ಪಂಜಾಬ್‌ನ ಖದೂರ್‌ ಸಾಹಿಬ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಚುನಾವಣಾ ಚಿಹ್ನೆಗಳನ್ನು ಹಂಚಲಾದ ಒಟ್ಟು 328 ಅಭ್ಯರ್ಥಿಗಳ ಪೈಕಿ 169 ಸ್ವತಂತ್ರ ಸ್ಪರ್ಧಿಗಳಲ್ಲಿ ಅವರು ಸೇರಿದ್ದಾರೆ. ವಾರಿಸ್‌‍ ಪಂಜಾಬ್‌ ದೇ ಸಂಘಟನೆಯ ಮುಖ್ಯಸ್ಥ ಅಮತಪಾಲ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.

ಫರೀದ್‌ಕೋಟ್‌ (ಮೀಸಲು) ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸರಬ್ಜೀತ್‌ ಸಿಂಗ್‌ ಖಾಲ್ಸಾ ಅವರಿಗೆ ಗನ್ನಾ ಕಿಸಾನ್‌(ಕಬ್ಬು ರೈತ) ಚುನಾವಣಾ ಚಿಹ್ನೆಯನ್ನು ನಿಗದಿಪಡಿಸಲಾಗಿದೆ. ಖಾಲ್ಸಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕರಲ್ಲಿ ಒಬ್ಬರಾಗಿದ್ದ ಬಿಯಾಂತ್‌ ಸಿಂಗ್‌ ಅವರ ಮಗ.

ಇಂದಿರಾ ಗಾಂಧಿಯವರ ಅಂಗರಕ್ಷಕರಾಗಿದ್ದ ಬಿಯಾಂತ್‌ ಸಿಂಗ್‌ ಮತ್ತು ಸತ್ವಂತ್‌ ಸಿಂಗ್‌ ಅವರುಗಳು ಅಕ್ಟೋಬರ್‌ 31, 1984 ರಂದು ಗಾಂಧಿ ಅವರನ್ನುಹತ್ಯೆ ಮಾಡಿದ್ದರು.ಏತನಧ್ಯೆ, ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ 328 ಅಭ್ಯರ್ಥಿಗಳಿಗೆ ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ನಿಗದಿಪಡಿಸಿದ್ದಾರೆ ಎಂದು ಪಂಜಾಬ್‌ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಗುರುದಾಸ್‌‍ಪುರದಿಂದ 14 ಸ್ವತಂತ್ರರು ಸೇರಿದಂತೆ 26 ಅಭ್ಯರ್ಥಿಗಳು, ಅಮತಸರದಲ್ಲಿ 30 ಸ್ಪರ್ಧಿಗಳಲ್ಲಿ 18 ಸ್ವತಂತ್ರರು ಮತ್ತು ಖದೂರ್‌ ಸಾಹಿಬ್‌ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳಲ್ಲಿ 18 ಸ್ವತಂತ್ರರು ಸ್ಪರ್ಧಿಸುತ್ತಿದ್ದಾರೆ ಎಂದು ಪಂಜಾಬ್‌ ಸಿಇಒ ಹೇಳಿದರು.

ಜಲಂಧರ್‌ನಲ್ಲಿ 20 ಅಭ್ಯರ್ಥಿಗಳ ಪೈಕಿ ಎಂಟು ಮಂದಿ ಪಕ್ಷೇತರರಾಗಿದ್ದರೆ, ಹೋಶಿಯಾರ್‌ಪುರದಲ್ಲಿ 16 ಅಭ್ಯರ್ಥಿಗಳ ಪೈಕಿ ನಾಲ್ವರು ಪಕ್ಷೇತರರಿದ್ದಾರೆ.ಆನಂದಪುರ ಸಾಹಿಬ್‌ನಲ್ಲಿ ಒಟ್ಟು 28 ಅಭ್ಯರ್ಥಿಗಳಲ್ಲಿ 13 ಮಂದಿ ಸ್ವತಂತ್ರರು ಮತ್ತು ಲುಧಿಯಾನದಲ್ಲಿ 43 ಅಭ್ಯರ್ಥಿಗಳಲ್ಲಿ 26 ಮಂದಿ ಸ್ವತಂತ್ರರು.

ಫತೇಘರ್‌ ಸಾಹಿಬ್‌ನಲ್ಲಿ ಒಟ್ಟು 14 ಅಭ್ಯರ್ಥಿಗಳಲ್ಲಿ ಏಳು ಮಂದಿ ಪಕ್ಷೇತರರು ಮತ್ತು ಫರೀದ್‌ಕೋಟ್‌ನಲ್ಲಿ ಒಟ್ಟು 28 ಅಭ್ಯರ್ಥಿಗಳಲ್ಲಿ 12 ಮಂದಿ ಪಕ್ಷೇತರರು. 17 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 29 ಅಭ್ಯರ್ಥಿಗಳು ಫಿರೋಜ್‌ಪುರದಿಂದ ಸ್ಪರ್ಧಿಸಿದ್ದಾರೆ.

RELATED ARTICLES

Latest News