Saturday, July 27, 2024
Homeರಾಷ್ಟ್ರೀಯಒಡಿಶಾದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ, ಜಗನ್ನಾಥನ ದರ್ಶನ

ಒಡಿಶಾದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ, ಜಗನ್ನಾಥನ ದರ್ಶನ

ಭುವನೇಶ್ವರ,ಮೇ20- ಲೋಕಸಭಾ ಚುನಾವಣೆಯ ಅಂಗವಾಗಿ ಪ್ರಧಾನಿ ನರೇಂದ್ರಮೋದಿಯವರು ಇಂದು ಒಡಿಶಾದಲ್ಲಿ ರೋಡ್‌ ಶೋ ನಡೆಸಿದರು. ನಿನ್ನೆ ರಾತ್ರಿ ಭುವನೇಶ್ವರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರಮೋದಿ ಇಂದು ಬೆಳಗ್ಗೆ 7 ಗಂಟೆಗೆ ಪುರಿಯ ತಲ್ಬಾನಿಯಾ ಹೆಲಿಪ್ಯಾಡ್‌ಗೆ ಬಂದರು. ಅಲ್ಲಿಂದ ನೇರವಾಗಿ ದೇವಸ್ಥಾನಕ್ಕೆ ತೆರಳಿ ಜಗನ್ನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದಾದ ಬಳಿಕ ಬೆಳಗ್ಗೆ 8 ಗಂಟೆಯ ನಂತರ ರೋಡ್‌ ಶೋ ಆರಂಭವಾಯಿತು.

ರೋಡ್‌ ಶೋ ವೇಳೆ ಪ್ರಧಾನಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಮಾಲ್‌ ಮತ್ತು ಪುರಿ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಡಾ. ಸಂಬಿತ್‌ ಪಾತ್ರ ಸಾಥ್‌ ನೀಡಿದರು.

ಒಂದು ಗಂಟೆ ರೋಡ್‌ ಶೋ:
ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿಯವರ ರೋಡ್‌ ಶೋ ನಡೆಯಿತು. ಒಡಿಶಾದ ಸಂಸ್ಕೃತಿಯ ಝಲಕ್‌ ಕೂಡ ಬಡ್ಡಂಡ್‌ನ ಎರಡೂ ಬದಿಗಳಲ್ಲಿ ಕಂಡುಬಂದಿದೆ. ಒಂದೆಡೆ ಕಲಾವಿದರು ಪ್ರಧಾನಿಯವರನ್ನು ಸ್ವಾಗತಿಸಲು ಗೋಟಿ ಪುವಾ ನೃತ್ಯ ಮಾಡಿದ್ದು, ಇನೊಂದೆಡೆ ಒಡಿಸ್ಸಿ ನೃತ್ಯದ ಮೂಲಕ ಮೋದಿ ಗಮನಸೆಳೆದರು. ಇದಾದ ಬಳಿಕ ಮೋದಿ ಚುನಾವಣಾ ಪ್ರಚಾರಕ್ಕಾಗಿ ಅಂಗುಲ್‌ಗೆ ತೆರಳಿದ್ದರು.

ಮಾರ್ಧನಿಸಿದ ಜೈಕಾರ:
ಪ್ರಧಾನಿಯನ್ನು ನೋಡಲು ಬೆಳಗ್ಗೆಯಿಂದಲೇ ಬಡ್ಡಂಡ್‌ನ ಎರಡೂ ಬದಿಗಳಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಜಗನ್ನಾಥ ಧಾಮದುದ್ದಕ್ಕೂ ಮೋದಿ-ಮೋದಿ ಘೋಷಣೆ ಪ್ರತಿಧ್ವನಿಸಿತು. ಈ ಮೂಲಕ ದೇಶದ ಇತರೆ ರಾಜ್ಯಗಳಂತೆ ಪುರಿಯಲ್ಲಿಯೂ ಮೋದಿ ಮ್ಯಾಜಿಕ್‌ ಕಾಣಿಸಿಕೊಂಡಿದೆ.

ವಿಶೇಷ ಭದ್ರತೆ:
ಪ್ರಧಾನಿಯವರ ಭದ್ರತೆಗಾಗಿ 63 ತುಕಡಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಮೂವರು ಎಸ್ಪಿ ಶ್ರೇಣಿಯ ಅಧಿಕಾರಿಗಳು ಇದ್ದರು. ಇದರೊಂದಿಗೆ 8 ಹೆಚ್ಚುವರಿ ಎಸ್ಪಿಗಳು, 22 ಡಿಎಸ್ಪಿಗಳು, 42 ಇನ್‌್ಸಪೆಕ್ಟರ್‌ಗಳು, 109 ಸಬ್‌ ಇನ್‌ಸ್ಪೆಕ್ಟರ್‌ಗಳು, 34 ಹೆಡ್‌ಕಾನ್‌ಸ್ಟೆಬಲ್‌ಗಳು, 202 ಕಾನ್‌ಸ್ಟೆಬಲ್‌ಗಳು, 250 ಗೃಹ ರಕ್ಷಕರನ್ನು ನಿಯೋಜಿಸಲಾಗಿತ್ತು.

ಪ್ರಧಾನಿಯವರು ಪುರಿ ತಲುಪುವ ಮುನ್ನವೇ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಇದರೊಂದಿಗೆ ಸಂಚಾರ ನಿರ್ಬಂಧವನ್ನೂ ಹೊರಡಿಸಲಾಗಿತ್ತು ಎಂದು ಪುರಿ ಎಸ್ಪಿ ಪಿನಾಕ್‌ ಮಿಶ್ರಾ ಹೇಳಿದ್ದಾರೆ.

RELATED ARTICLES

Latest News