ಟೋಕಿಯೋ,ನ.13- ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಮರ ಬಳಸಿ ಮನೆ ಕಟ್ಟುವ ಯೋಜನೆಯನ್ನು ಹೊಂದಿರುವ ವಿಜ್ಞಾನಿಗಳು, ಇದರ ಸಾಧ್ಯಾಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಮರದಿಂದ ತಯಾರಿಸಿದ ಉಪಗ್ರಹ ಲಿಗ್ನೋಸ್ಯಾಟ್ ಉಡಾವಣೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಮರದ ಉಪಗ್ರಹ ಎಂಬ ಖ್ಯಾತಿ ಪಡೆದುಕೊಂಡಿದೆ.
ಮರ ಎಂಬುದಕ್ಕೆ ಲ್ಯಾಟಿನ್ ಭಾಷೆಯಲ್ಲಿರುವ ಪದವನ್ನು ಬಳಸಿ ಲಿಗ್ನೋಸ್ಯಾಟ್ ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಜಪಾನ್ನ ಕ್ಯೋಟೋ ವಿವಿ ಮತ್ತು ಸುಮಿಟಾಮೋ ಫಾರೆಸ್ಟ್ರಿ ಸೇರಿ ತಯಾರು ಮಾಡಿರುವ ಈ ಉಪಗ್ರಹವನ್ನು ಅಮೆರಿಕದ ಸ್ಪೇಸ್ ಎಕ್‌್ಸನ ರಾಕೆಟ್ ಮೂಲಕ ನವೆಂಬರ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಇದನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಉಪಗ್ರಹ ಕೇವಲ ಅಂಗೈ ಅಗಲವಿದೆ. ಬಾಹ್ಯಾಕಾಶಕ್ಕೆ ಕಳುಹಿಸುವ ನವೀಕರಿಸಬಹುದಾದ ವಸ್ತುವಿನ ಮೇಲೆ ಕಾಸಿಕ್ ಪರಿಣಾಮ ಏನಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಇದರ ಮೂಲಕ ಬಾಹ್ಯಾಕಾಶದಲ್ಲಿ ಮನುಷ್ಯದ ಜೀವನ ಕುರಿತ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಕ್ಯೋಟೋ ಸಂಸ್ಥೆಯ ಪ್ರಮುಖ ಗುರಿ ಚಂದ್ರ ಮತ್ತು ಮಂಗಳನ ಮೇಲೆ ಮರದಿಂದ ಮನೆ ನಿರ್ಮಾಣ ಮಾಡುವುದಾಗಿದೆ. ಇದಕ್ಕಾಗಿ 50 ವರ್ಷಗಳ ಗುರಿ ಹಾಕಿಕೊಳ್ಳಲಾಗಿದ್ದು, ನಾಸಾ ಪ್ರಮಾಣಿತ ಮರದ ಉಪಗ್ರಹವನ್ನು ತಯಾರು ಮಾಡುವ ಉದ್ದೇಶವಿದೆ. ಪ್ರಸ್ತುತ ಈ ಉಪಗ್ರಹವನ್ನು ಜಪಾನ್ನಲ್ಲಿ ಸಿಗುವ ಮ್ಯಾಗ್ನೊಲಿಯಾ ಹೊನೊಕಿ ಎಂಬ ಮರದಿಂದ ತಯಾರಿಸಲಾಗಿದೆ ಎಂದು ವಿಜ್ಞಾನಿ ಟಾಕೋ ಡಾಯ್ ಹೇಳಿದ್ದಾರೆ.
ಮುಂದಿನ 6 ತಿಂಗಳು ಈ ಉಪಗ್ರಹ ಭೂಮಿಯ ಸುತ್ತ ಸುತ್ತುತ್ತದೆ. ಬಾಹ್ಯಾಕಾಶದಲ್ಲಿ ಮರದ ಬಾಳಿಕೆಯನ್ನು ಮೌಲ್ಯಮಾಪನ ಮಾಡಿ ಡೇಟಾವನ್ನು ಸಂಗ್ರಹಿಸುತ್ತದೆ. ಈ ಡೇಟಾವು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಮರವನ್ನು ಬಳಸುವ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ನಿರ್ಣಾಯಕವಾಗಿದೆ.
ಲೋಹದ ಉಪಗ್ರಹಗಳು ಮರು-ಪ್ರವೇಶದ ಸಮಯದಲ್ಲಿ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಬಿಡುತ್ತವೆ, ಆದರೆ ಮರದ ಉಪಗ್ರಹಗಳ ಸಂದರ್ಭದಲ್ಲಿ ಇದು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಕಡಿಮೆ ಪರಿಸರದ ಹೆಜ್ಜೆಗುರುತನ್ನು ಉಂಟುಮಾಡುತ್ತದೆ.
ಬಾಹ್ಯಾಕಾಶದಲ್ಲಿ ಪ್ರತಿ 45 ನಿಮಿಷಗಳಿಗೊಮೆ ಸೂರ್ಯನ ಬೆಳಕು ಹಾಗೂ ಕತ್ತಲು ಆವರಿಸುವುದರಿಂದ ಮೈನಸ್ 100 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಿಂದ 100 ಡಿಗ್ರಿ ಸೆಲ್ಸಿಯಸ್ವರೆಗೂ ತಾಪಮಾನ ಬದಲಾಗುತ್ತದೆ. ಕಕ್ಷೆಗೆ ಸೇರಿದ ಬಳಿಕ ಈ ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಅಲ್ಲಿನ ಪರಿಸರದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ನಿರಂತರವಾಗಿ ಭೂಮಿ ಮೇಲಿರುವ ಕೇಂದ್ರಕ್ಕೆ ಕಳುಹಿಸುತ್ತದೆ.
ಬಾಹ್ಯಾಕಾಶದಲ್ಲಿ ವಿಕಿರಣಗಳು ಉಪಗ್ರಹ ಒಳಗಿರುವ ಸೆಮಿಕಂಡಕ್ಟರ್ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಲಿಗ್ನೊಸ್ಯಾಟ್ ಅಧ್ಯಯನ ಮಾಡಲಿದೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಡಾಟಾ ಸೆಂಟರ್ಗಳನ್ನು ಮರದಿಂದ ನಿರ್ಮಾಣ ಮಾಡಬಹುದು ಎಂಬುದು ವಿಜ್ಞಾನಿಗಳ ಆಲೋಚನೆ.
ಹಿಂದಿನ ಪರೀಕ್ಷೆಗಳ ಸಂದರ್ಭದಲ್ಲಿ, ಮರದ ತುಂಡುಗಳನ್ನು ಐಎಸ್ಎಸ್ನಲ್ಲಿ ಹತ್ತು ತಿಂಗಳುಗಳ ಕಾಲ ಬಾಹ್ಯಾಕಾಶ ಸನ್ನಿವೇಶಕ್ಕೆ ತೆರೆದಿಡಲಾಯಿತು. ಈ ಪರೀಕ್ಷೆಗಳ ಫಲಿತಾಂಶಗಳು ಆಶಾದಾಯಕವಾಗಿವೆ. ಈ ಮರದ ವಸ್ತುಗಳು ಅತ್ಯಂತ ಕಡಿಮೆ ಹಾನಿಗೊಳಗಾಗಿದ್ದು, ಬಾಹ್ಯಾಕಾಶದಲ್ಲಿ ಮರ ದೀರ್ಘಕಾಲ ಉಳಿಯಬಹುದು ಎಂಬ ನಂಬಿಕೆ ಮೂಡಲು ಕಾರಣವಾಗಿದೆ.
ಮರದ ಉಪಗ್ರಹಗಳನ್ನು ಬಳಸುವುದರಿಂದ ಲಭಿಸುವ ಅತಿದೊಡ್ಡ ಪ್ರಯೋಜನವೆಂದರೆ, ಅವುಗಳ ಕಾರ್ಯಾಚರಣಾ ಅವಧಿ ಮುಕ್ತಾಯಗೊಂಡ ಬಳಿಕ, ಅವುಗಳ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುತ್ತಿದ್ದಂತೆ ಯಾವುದೇ ತ್ಯಾಜ್ಯವೂ ಉಳಿಯದಂತೆ ಸಂಪೂರ್ಣವಾಗಿ ದಹಿಸಿ ಹೋಗುತ್ತವೆ.
ಲಿಗ್ನೋಸ್ಯಾಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದರೆ ತಂಡವು ಮರದ ಉಪಗ್ರಹಗಳನ್ನು ಸ್ಪೇಸ್ ಎಕ್‌್ಸಗೂ ಪ್ರಯೋಜನವಾಗುವ ಅಥವಾ ಪರಿಚಯಿಸುವ ಸಾಧ್ಯತೆಯಿದೆ. ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್‌್ಸ ಸ್ಟಾರ್ ಲಿಂಕ್ ಯೋಜನೆಗೆ ಇದು ನೆರವಾಗಬಹುದು. ಉಪಗ್ರಹವು ಪರಿಸರಸ್ನೇಹಿ ವಸ್ತುಗಳೊಂದಿಗೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಕ್ರಾಂತಿಯನ್ನು ಉಂಟುಮಾಡಬಹುದು. ಸುಮಿಟಾಮೊ ಫಾರೆಸ್ಟ್ರಿಯ ಕೆಂಜಿ ಕರಿಯಾ ಅವರ ಪ್ರಕಾರ, ಮರದ ಉದ್ಯಮವು ಇತ್ತೀಚಿನ ಆವಿಷ್ಕಾರದಿಂದ ಪ್ರಯೋಜನ ಪಡೆಯುತ್ತದೆ.