ಬೆಂಗಳೂರು,ಮೇ 16- ಪೆನ್‌ಡ್ರೈವ್ ಪ್ರಕರಣದ ಬಳಿಕವೂ ಜೆಡಿಎಸ್-ಬಿಜೆಪಿ ಮೈತ್ರಿ ವಿಧಾನಪರಿಷತ್ ಚುನಾವಣೆಯಲ್ಲೂ ಮುಂದುವರೆದಿದೆ ಎಂದರೆ ಎರಡೂ ಪಕ್ಷಗಳು ಒಟ್ಟಾಗಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರಕರಣ ಬಯಲಿಗೆ ಬಂದಿತ್ತು. ಅನಂತರ ಬಹುಷಃ ಬಿಜೆಪಿಯವರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಮುಂದುವರೆದಿದೆ. ಬಿಜೆಪಿ, ಜೆಡಿಎಸ್‌ಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಇದರರ್ಥ ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ಯಾರು ಎಷ್ಟೇ ದೊಡ್ಡ ಅಪರಾಧ ಮಾಡಿದರೂ ಅದು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದರು.
ಪ್ರತಿಬಾರಿಯೂ ಸಿಬಿಐ ತನಿಖೆಗೆ ಕೇಳುತ್ತಾರೆ. ಯಾವ ಕಾರಣಕ್ಕಾಗಿ ಸಿಬಿಐ ತನಿಖೆ ಬೇಕು? ಈ ಹಿಂದೆ ಅಕ್ರಮ ಗಣಿಗಾರಿಕೆ, ಪರೇಷ್‌ಮೆಹೇಸ್ತ ಹಾಗೂ ಡಿವೈಎಸ್ಪಿ ಗಣಪತಿ ಪ್ರಕರಣಗಳಲ್ಲಿ ಸಿಬಿಐ ಯಾವ ಸಾಧನೆ ಮಾಡಿದೆ? ನಮ್ಮ ಪೊಲೀಸರ ತನಿಖಾ ವರದಿಯನ್ನು ಅನುಮೋದಿಸಿದ್ದು ಬಿಟ್ಟರೆ ಬೇರೆ ಯಾವ ಪ್ರಗತಿಯೂ ಇಲ್ಲ. ಜೆಡಿಎಸ್-ಬಿಜೆಪಿಯವರ ಉದ್ದೇಶ ಅಮಿತ್ ಷಾ ಅವರ ಕೈಕಾಲಿಗೆ ಬಿದ್ದು ಪ್ರಕರಣವನ್ನು ಮುಚ್ಚಿಹಾಕಿಸುವುದು. ಅದಕ್ಕಾಗಿಯೇ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಅವರ ರಾಜೀನಾಮೆ ಕೇಳುತ್ತಿದ್ದಾರೆ. ನಮ ಮನೆಯ ಮಗ ತಪ್ಪು ಮಾಡಿದ್ದಾನೆ ಎಂದು ಜೆಡಿಎಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಕಾಂಗ್ರೆಸ್‌ನವರು ಏಕೆ ರಾಜೀನಾಮೆ ಕೊಡಬೇಕು? ಎಂದು ಪ್ರಶ್ನಿಸಿದರು.
ಪ್ರಕರಣದ ನೈತಿಕತೆ ಹೊತ್ತು ಪ್ರಜ್ವಲ್ ರೇವಣ್ಣ ಅವರ ಕುಟುಂಬದ ಸದಸ್ಯರು ತಮ ಹುದ್ದೆಗಳಿಗೆ ರಾಜೀನಾಮೆ ಕೊಡಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಬಿಜೆಪಿಯವರು ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ತಟಸ್ಥರಾಗಿರುವುದೇಕೆ? ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲಿ ನಾಪತ್ತೆಯಾಗಿದ್ದಾರೆ? ಹಾಸನಕ್ಕೆ ಹೋಗಿ ಏಕೆ ಸಂತ್ರಸ್ತರಿಗೆ ಸಾಂತ್ವಾನ ಹೇಳುತ್ತಿಲ್ಲ. ಅಲ್ಲಿನ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂಬ ಭಯವೇ? ಎಂದು ಪ್ರಶ್ನಿಸಿದರು.
ರಾಜಕೀಯ ಲಾಭವಾಗದೇ ಇದ್ದರೆ ಬಿಜೆಪಿಯವರು ಸಂತ್ರಸ್ತೆಯರ ವಿಚಾರದಲ್ಲಿ ಕಾಳಜಿ ವಹಿಸುವುದಿಲ್ಲ. ಕೊಡಗಿನಲ್ಲಿ ವಿದ್ಯಾರ್ಥಿನಿ ಕೊಲೆ, ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಬಿಜೆಪಿಯವರು ಉಸಿರು ಬಿಡುತ್ತಿಲ್ಲ. ಅದೇ ಹುಬ್ಬಳ್ಳಿ ಪ್ರಕರಣದಲ್ಲಿ ಅಮಿತ್ ಷಾ ಇಂದ ಹಿಡಿದು ಎಲ್ಲಾ ಬಿಜೆಪಿ ನಾಯಕರೂ ಸಂತ್ರಸ್ತೆಯರ ಮನೆಗೆ ಭೇಟಿ ನೀಡಿದ್ದರು. ಕೊಡಗು ಪ್ರಕರಣದಲ್ಲಿ ವೈಯಕ್ತಿಕ ಎಂದವರು, ನೇಹಾ ಪ್ರಕರಣದಲ್ಲಿ ವಿಶೇಷ ಆಸಕ್ತಿ ತೋರಿಸಿದರು. ಇದರರ್ಥ ಅವರ ರಾಜಕೀಯ ಲಾಭವೇ ಹೊರತು ಜನಪರ ಕಾಳಜಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಆರೋಪಿ ಪ್ರಜ್ವಲ್ ಬಂಧನಕ್ಕೆ ಯಾವುದೇ ಸಹಕಾರ ನೀಡುತ್ತಿಲ್ಲ. ಬ್ಲೂ ಕಾರ್ನರ್ ನೋಟೀಸ್ ಜಾರಿಯಾಗಿದ್ದು, ಕೇಂದ್ರ ಸರ್ಕಾರ ಇಂಟರ್‌ಪೋಲ್‌ಗೆ ಪತ್ರ ಬರೆದಿಲ್ಲ ಎಂದರು.