ಬೆಂಗಳೂರು, ಮೇ 4- ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕರಾದ ಹೆಚ್.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕೃತವಾದ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದ ಎಸ್ ಐಟಿ ತಂಡವು ಅಲ್ಲಿ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.
ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಹೆಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆ ಅಪಹರಣ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಂದು ಸುಧೀರ್ಘ ವಿಚಾರಣೆ ನಡೆಯಿತು. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಿಚಾರಣೆ ನಡೆಸಿ, ವಾದ-ಪ್ರತಿವಾಧವನ್ನು ಆಲಿಸಿ, ಈ ತೀರ್ಪು ನೀಡಿದರು.
ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮೂರ್ತಿ.ಡಿ.ನಾಯಕ್ ಅವರು ಎರಡನೇ ಎಫ್.ಐ.ಆರ್ ನಲ್ಲಿ ಎಲ್ಲೂ ರೇವಣ್ಣ ಅವರ ವಿರುದ್ಧ ನೇರ ಆರೋಪವಿಲ್ಲ. ಎರಡನೇ ಆರೋಪಿ ಸತೀಶ್ ಬಾಬಣ್ಣ ಅವರ ಮೇಲೆ ಮಾತ್ರವೇ ಆರೋಪವಿದೆ. ಮಹಿಳೆಯನ್ನ ಸತೀಶ್ ಬಾಬಣ್ಣ ಅವರು ಬಂದು ಕರೆದುಕೊಂಡು ಹೋದರು ಎಂದು ಮಾತ್ರವೇ ಹೇಳದಾಗಿದೆಯೇ ಹೊರತು ರೇವಣ್ಣ ನವರು ಹೇಳಿದಕ್ಕೆ ಕರೆದುಕೊಂಡು ಹೋಗಿದೆಂದು ಎಲ್ಲೂ ತಿಳಿಸಿಲ್ಲ. ಅದೇ ರೀತಿ ಎಫ್.ಐ.ಆರ್ ನಲ್ಲೂ ಮಹಿಳೆಯ ಹೆಸರನ್ನು ಉಲ್ಲೇಖಿಸಿಲ್ಲ. ರೇವಣ್ಣ ವಿರುದ್ಧ ಕೇವಲ ಹೇಳಿದ-ಕೇಳಿದ ಎಂಬತಹ ಆಧಾರದ ರಹಿತ ಅಂಶಗಳಿವೆ ಎಂದರು.
ದೂರುದಾರರ ಹೇಳಿಕೆ ಬಿಟ್ಟರೆ ಎಫ್.ಐ.ಆರ್ ನಲ್ಲಿ ಏನ್ನೂ ಇಲ್ಲ. ಪ್ರಕರಣವನ್ನ ಅನಗತ್ಯವಾಗಿ ವಿಜೃಂಭಿಸುವ ಯತ್ನವನ್ನ ಎಸ್.ಐ.ಟಿ ಮಾಡುತ್ತಿದೆ. ಜಾಮೀನು ಸಿಗಬಾರದೆಂದು ಸೆಕ್ಷನ್ ೩೬೩, ೩೬೪ಎರ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎ೨ ಆರೋಪಿಗೂ, ರೇವಣ್ಣಗೂ ಯಾವುದೇ ಸಂಬಧವಿಲ್ಲ. ಏಪ್ರಿಲ್ ೨೯ ರಂದು ಘಟನೆ ನಡೆದಿದೆ ಎಂದು ದೂರಿದರೂ, ಮೇ ೨ಕ್ಕೆ ಎಫ್.ಐ.ಆರ್ ದಾಖಲಾಗಿದೆ.
ಪ್ರಾಸಿಕ್ಯೂಷನ್ ಪರ ವಕೀಲರು ನಿನ್ನೆಯಷ್ಟೆ ರೇವಣ್ಣ ವಿರುದ್ಧ ಜಾಮೀನು ರಹಿತ ಆರೋಪಗಳಿಲ್ಲವೆಂದು ಹೇಳಿದ್ದರು. ಆ ಕಾರಣಕ್ಕೆ ನಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಾಪಸ್ಸ್ ಪಡೆದಿದ್ದೆವು. ಆದರೆ ಅವರು ಪುನ: ಮತ್ತೊಂದು ನೋಟೀಸ್ ನೀಡಿದ್ದಾರೆ. ಈ ನಡೆಯನ್ನು ಗಮನಿಸಿದರೆ ಅರ್ಜಿದಾರರು ನಮ್ಮನ್ನು ಬಂಧಿಸಬಹುದೆAದು ಆತಂಕವಿದೆ. ತುರ್ತಾಗಿ ಜಾಮೀನು ನೀಡಿದರೆ ಸಂಪೂರ್ಣವಾಗಿ ತನಿಖೆಗೆ ಸಹಕರಿಸಲು ಸಿದ್ಧವಿದ್ದೇವೆ.
ಬಂಧನದಿದ ರಕ್ಷಣೆ ಕೊಟ್ಟರೆ ತಕ್ಷಣವೇ ರೇವಣ್ಣ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರೇವಣ್ಣ ಪರ ವಕೀಲರು ಪ್ರಬಲ ವಾದ ಮಂಡಿಸಿದರು. ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಪರ ವಕೀಲರಾದ ಎಸ್.ಪಿ.ಜಗದೀಶ್ ಅವರು ವಾದ ಮಂಡಿಸಿ ಇನ್ ಕ್ಯಾಮರಾ ವಿಚಾರಣೆಗೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಮಹಿಳೆಯ ಕಿಡ್ನಾಪ್ ಆಗಿದೆ. ಅವರನ್ನ ಕಿಡ್ನಾಪ್ ಮಾಡಿದು ಯಾರು ? ಬಡ ಮಹಿಳೆಯನ್ನ ಹುಡುಕಲು ಎಸ್.ಐ.ಟಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ಸಂತ್ರಸ್ತ ಮಹಿಳೆ ದೂರು ನೀಡದಂತೆ ತಡೆಯಲಾಗುತ್ತಿದೆ. ನಮ್ಮ ಪೊಲೀಸರು ಹಗಲು-ರಾತ್ರಿ ಮಹಿಳೆಯನ್ನು ಹುಡುಕುತ್ತಿದ್ದಾರೆ. ದೂರು ನೀಡಿದರೆ ಎಚ್ಚರ ಎಂಬ ಸಂದೇಶ ರವಾನಿಸಿದಂತಿದೆ ಎಂದು ಬಿಹಾರ ರಾಜ್ಯದಂತಾಗುತ್ತದೆ ಎಂದು ಹೇಳಿದರು.
ರೇವಣ್ಣ ರಾಜಕೀಯ, ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಜಾಮೀನು ನೀಡಬಾರದೆಂದು ವಕೀಲರು ಪ್ರಬಲ ವಾದ ಮಂಡಿಸಿದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಕೆಲಕಾಲ ಕಲಾಪವನ್ನು ಮುಂದೂಡಿ ನಂತರ ತೀರ್ಪನ್ನ ಪ್ರಕಟಿಸಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.
ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.