ಬೆಂಗಳೂರು,ಅ.8– ಚಿನ್ನದ ಅಂಗಡಿ ಮಾಲೀಕನಿಂದ ಪಡೆದಿದ್ದ ಚಿನ್ನದ ಒಡವೆಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾರ್ಪಡಿಸಿ ನಗರದ ವಿವಿಧ ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಹಲಸೂರು ಗೇಟ್ ಠಾಣೆ ಪೋಲೀಸರು ಬಂಧಿಸಿದ್ದಾರೆ , 10 ಲಕ್ಷ ನಗದು ಸೇರಿದಂತೆ 38 ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಬಿಲ್ವಾರ ಜಿಲ್ಲೆ ಅಸಿಂದ ತಾಲ್ಲೂಕಿನ ಕಲಿಯಾಸ್ ಗ್ರಾಮದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆರೋಪಿಯಿಂದ ಚಿನ್ನದ ಗಟ್ಟಿಯನ್ನು ಸ್ವೀಕರಿಸಿದ್ದ ವಿವಿಧ ಜ್ಯುವೆಲರಿಶಾಪ್ ಮಾಲೀಕರಿಂದ 384 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರ್ತಪೇಟೆಯ ಚಿನ್ನದ ವ್ಯಾಪಾರಿಯೊಬ್ಬರಿಂದ ಈ ಹಿಂದೆ ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಚಿನ್ನದ ಒಡವೆಗಳನ್ನು ಪಡೆದು ಪಾಲಿಶ್ ಮಾಡಿ ಅರಳುಗಳನ್ನು ಕೂರಿಸಿ ಆಭರಣಗಳನ್ನು ನೀಡುತ್ತಿದ್ದನು. ಅದರಂತೆ ಮೇ 30ರಿಂದ ಒಂದು ತಿಂಗಳ ಅವ„ಯಲ್ಲಿ ಪಾಲಿಶ್ ಹಾಗೂ ಅರಳುಗಳನ್ನು ಕೂರಿಸುವ ವ್ಯಕ್ತಿಗೆ 1 ಕೆಜಿ 277 ಗ್ರಾಂ ಚಿನ್ನದ ಆಭರಣಗಳನ್ನು ಜ್ಯುವೆಲರಿ ಮಾಲೀಕರು ನೀಡಿದ್ದಾರೆ.
ಆದರೆ ಆ ವ್ಯಕ್ತಿ ಆ.18ರವರೆಗೆ ಯಾವುದೇ ಆಭರಣಗಳನ್ನು ಹಿಂದಿರುಗಿಸದೆ ಇದ್ದಾಗ ಜ್ಯುವೆಲರಿ ಮಾಲೀಕರು ನಗರ್ತಪೇಟೆಯಲ್ಲಿನ ಆತನ ಅಂಗಡಿ ಬಳಿ ಹೋಗಿ ನೋಡಿದಾಗ ಅಂಗಡಿ ಖಾಲಿ ಮಾಡಿಕೊಂಡು ಹೋಗಿರುವುದು ತಿಳಿದು ಹಲಸೂರು ಗೇಟ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಖಚಿತ ಮಾಹಿತಿ ಕಲೆ ಹಾಕಿ ಆರೋಪಿಯನ್ನು ರಾಜಸ್ಥಾನದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆಭರಣ ಪಡೆದು ವಂಚಿಸಿರುವುದು ಗೊತ್ತಾಗಿದೆ.
ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಚಿನ್ನದ ಅಂಗಡಿಯಿಂದ ಪಡೆದಿದ್ದ ಒಡವೆಗಳನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಡಿಸಿ ನಗರದ ವಿವಿಧ ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿ ಹಣವನ್ನು ಪಡೆಯದೆ ರಸೀದಿ ಪಡೆದುಕೊಂಡು ಊರಿಗೆ ಹೋಗಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಆರೋಪಿ ನೀಡಿದ ಮಾಹಿತಿಯಿಂದ 384 ಗ್ರಾಂ ಚಿನ್ನದ ಗಟ್ಟಿ ಹಾಗೂ 10.99 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್‍ಸ್ಪೆಕ್ಟರ್ ಹನುಮಂತ.ಕೆ ಭಜಂತ್ರಿ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.