ದಾವಣಗೆರೆ,ಅ.29- ಚಾಲಾಕಿ ಕಳ್ಳರು ಬ್ಯಾಂಕಿಗೆ ರಜೆ ಇರುವ ದಿನವನ್ನೇ ಗುರಿಯಾಗಿಸಿಕೊಂಡು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ಶಾಖೆಗೆ ಕನ್ನ ಹಾಕಿ 13 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಖತರ್ನಾಕ್ ಚೋರರಿಗಾಗಿ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಕಳ್ಳರ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಬ್ಯಾಂಕ್ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಶೋಧ ನಡೆಸುತ್ತಿದ್ದಾರೆ.
ನಗರದ ನ್ಯಾಮತಿಯ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಕಟ್ಟಡದ ಕಿಟಕಿ ಸರಳುಗಳನ್ನು ಮೀಟಿ ಆ ಮೂಲಕ ಒಳನುಗ್ಗಿದ ಚೋರರು ಲಾಕರ್‌ಗಳನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಲೂಟಿ ಮಾಡಿದ್ದಾರೆ.
ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಶ್ವಾನದಳದ ಕಣ್ತಪ್ಪಿಸಲು ಖಾರದ ಪುಡಿಯನ್ನು ಬ್ಯಾಂಕಿನ ಒಳಗೆ ಎರಚಿ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ಬ್ಯಾಂಕ್‌ನಲ್ಲಿದ್ದ 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಬ್ಯಾಂಕ್‌ಗೆ ಬಂದ ನೌಕರರು ಶಾಕ್ ಆಗಿದ್ದು, ಯಾರೋ ಕಿಟಕಿ ಮೂಲಕ ಖಾರದ ಪುಡಿ ಚೆಲ್ಲಿದಾರೆ ಎಂದು ಸುಮನಾಗಿದ್ದಾರೆ. ಅವರಿಗೆ ಯಾವುದೇ ಅನುಮಾನ ಬಂದಿಲ್ಲ. ನಂತರ ವ್ಯವಸ್ಥಾಪಕರು ಕಚೇರಿಗೆ ಬಂದಾಗ ಬ್ಯಾಂಕ್‌ನಲ್ಲಿ ಕಳ್ಳತನವಾಗಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಎಸ್ಪಿ ಸ್ಯಾಮ್ ವರ್ಗೀಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಭೇಧಿಸಲು 3 ವಿಶೇಷ ತಂಡ ರಚನೆ ಮಾಡಲಾಗಿದೆ. ಬ್ಯಾಂಕ್ ಲೂಟಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹರಡುತ್ತಿದಂತೆ ಜನರು ಬ್ಯಾಂಕ್ ಬಳಿ ಜಮಾಯಿಸಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಸುರಕ್ಷಿತವಲ್ಲ ಎಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದವರು ಈಗ ಆತಂಕಗೊಂಡಿದ್ದಾರೆ.
ಬ್ಯಾಂಕ್‌ನ ಗಾಹಕರಿಗೆ ಮಾಹಿತಿ ನೀಡಿ ಕಳ್ಳರ ಹಿಡಿದು ಒಡೆವೆ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ನಗರದ ಜನತೆಯನ್ನು ಈ ಘಟನೆ ಬೆಚ್ಚಿಬೀಳಿಸಿದೆ. ಕಳೆದ 2014ರಲ್ಲಿ ಅರಕೆರೆ ಬಳಿಯ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. 2019ರಲ್ಲಿ ಅದೇ ಬ್ಯಾಂಕ್ ಮತ್ತೆ ಕಳ್ಳತನ ಮಾಡಿ 2 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈಗ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿದೆ.