ವಾಷಿಂಗ್ಟನ್,ಜ.18- ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗಿಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಆ ದೇಶದ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ತೈಲ ಸಾಗಿಸುವ ರಷ್ಯಾ ಹಡಗುಗಳಿಗೆ ಅಮೆರಿಕ ಹಾಕಿರುವ ನಿರ್ಬಂಧ ಚೀನಾ ಮತ್ತು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ದೇಶ ರಷ್ಯಾ. ಈ ದೇಶದ 2 ತೈಲ ಉತ್ಪಾದಕರಾದ ಗಾಜ್‌ಪೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ಮತ್ತು ರಷ್ಯಾದ ತೈಲವನ್ನು ಸಾಗಿಸುವ 183 ಹಡಗುಗಳ ಮೇಲೆ ಯುಎಸ್ ಹೊಸ ನಿರ್ಬಂಧಗಳನ್ನು ಹೇರಿದೆ. ಕಳೆದ ವಾರ ನಿರ್ಬಂಧಗಳ ಕುರಿತು ಬೈಡೆನ್ ಘೋಷಣೆ ಮಾಡಿದ್ದಾರೆ.
ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಪ್ರಮುಖ ಆದಾಯ ಮೂಲವಾಗಿರುವ ಕ್ಷೇತ್ರವನ್ನೇ ಗುರಿಯಾಗಿಸಿ ಅಮೆರಿಕ ಈ ನಿರ್ಧಾರ ಪ್ರಕಟಿಸಿದೆ. ರಷ್ಯಾದ ತೈಲ ಮತ್ತು ದ್ರವೀಕತ ನೈಸರ್ಗಿಕ ಅನಿಲ ವಲಯಗಳ ಮೇಲೆ ನಿರ್ಬಂಧ ಹೇರಲು ಇದು ಸಹಕಾರಿಯಾಗಲಿದೆ ಎಂದು ಬೈಡೆನ್ ತಿಳಿಸಿದ್ದಾರೆ.
ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು 2022 ರಲ್ಲಿ ಗ್ರೂಪ್ ಆಫ್ ಸೆವೆನ್ ದೇಶಗಳು ಹೇರಿದ ಬೆಲೆಯ ಮಿತಿಯಿಂದಾಗಿ ಯೂರೋಪ್‌ನಿಂದ ಏಷ್ಯಾಗೆ ರಷ್ಯಾದ ತೈಲ ವ್ಯಾಪಾರವನ್ನು ಬದಲಾಯಿಸಲಾಗಿತ್ತು. ಆಗಿನಿಂದ ಹೆಚ್ಚಿನ ಟ್ಯಾಂಕರ್‌ಗಳನ್ನು ಭಾರತ ಮತ್ತು ಚೀನಾ ತೈಲ ರವಾನಿಸಲು ಬಳಸಲಾಯಿತು. ಕೆಲವು ಟ್ಯಾಂಕರ್‌ಗಳು ಇರಾನ್‌ನಿಂದ ತೈಲವನ್ನು ರವಾನಿಸಿದ್ದವು.