ಬೆಂಗಳೂರು,ಏ.2- ಹದಿನಾರನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು 2023-24ನೇ ಸಾಲಿಗೆ ಸಂಬಂಧಿಸಿದ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಜೂನ್ 30ರೊಳಗೆ ಕರ್ನಾಟಕ ಲೋಕಾಯುಕ್ತಕ್ಕೆ ಸಲ್ಲಿಸಬೇಕಿದೆ.
ನಿಗದಿತ ನಮೂನೆಯಲ್ಲಿ ಶಾಸಕರು ಕಳೆದ ಆರ್ಥಿಕ ಸಾಲಿನ ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಲೋಕಾಯುಕ್ತರಿಗೆ ನೇರವಾಗಿ ಸಲ್ಲಿಸುವಂತೆ ವಿಧಾನಸಭೆ ಕಾಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿರುವ ಮಾಹಿತಿಯನ್ನು ವಿಧಾನಸಭೆ ಸಚಿವಾಲಯಕ್ಕೆ ನೀಡುವಂತೆ ತಿಳಿಸಿದ್ದಾರೆ. ಲೋಕಾಯುಕ್ತರು ಮಾ.22ರಂದು ಪತ್ರ ಬರೆದು ಶಾಸಕರು ಆಸ್ತಿ ವಿವರ ಸಲ್ಲಿಸಲು ಸೂಚಿಸಿರುತ್ತಾರೆ. ಹೀಗಾಗಿ ಎಲ್ಲ ಸದಸ್ಯರಿಗೆ ವಿಧಾನಸಭೆ ಸಚಿವಾಲಯ ಈ ಮಾಹಿತಿಯನ್ನು ರವಾನಿಸಿದೆ.
ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಕಲಂ 7ರ ಉಪ ಕಲಂ(1) ಅಡಿ ಉಲ್ಲೇಖಿಸಿರುವಂತೆ ಪ್ರತಿಯೊಬ್ಬ ವಿಧಾನಸಭೆಯ ಸದಸ್ಯರು ಆಯಾ ವರ್ಷದ ಜೂ.30ರೊಳಗೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.