Friday, November 22, 2024
Homeರಾಜಕೀಯ | Politicsಎಸ್.ಆರ್.ವಿಶ್ವನಾಥ್ ಭೇಟಿಯಾದ ಡಾ.ಕೆ.ಸುಧಾಕರ್

ಎಸ್.ಆರ್.ವಿಶ್ವನಾಥ್ ಭೇಟಿಯಾದ ಡಾ.ಕೆ.ಸುಧಾಕರ್

ಬೆಂಗಳೂರು, ಏ.3- ತಮ್ಮ ಪುತ್ರನಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‍ಗಾಗಿ ಪ್ರಯತ್ನಿಸಿ ವಿಫಲರಾದ ಬಳಿಕ ಅಸಮಾಧಾನಗೊಂಡಿದ್ದ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್‍ರನ್ನು ಬಿಜೆಪಿ ಅಭ್ಯರ್ಥಿ ಡಾ,ಕೆ.ಸುಧಾಕರ್ ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನ್ ಅಗರ್‍ವಾಲ್ ಅವರೊಂದಿಗೆ ಬೆಳಗ್ಗೆ ವಿಶ್ವನಾಥ್ ಅವರ ಮನೆಗೆ ಸುಧಾಕರ್ ಭೇಟಿ ನೀಡಿದರು. ಈ ವೇಳೆ ಸೌಹಾರ್ದತಾ ಚರ್ಚೆಯಾಗಿದೆ. ವಿಶ್ವನಾಥ್ ಅವರು ಮುನಿಸು ಮರೆತು ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ವಿಶ್ವನಾಥ್ ಉಪಾಹಾರ ಕೂಟ ನಡೆಸಿದ್ದಾರೆ.

ಅದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರು ರಾಜ್ಯ ಚುನಾವಣಾ ಉಸ್ತುವಾರಿ ರಾಧಮೋಹನ್ ಅಗರ್‍ವಾಲ್ ಹಾಗೂ ನನ್ನನ್ನು ಉಪಾಹಾರಕ್ಕೆ ಆಹ್ವಾನಿಸಿದ್ದರು. ದಾಸರಹಳ್ಳಿ ಶಾಸಕ ಮುನಿರಾಜು, ಮಾಜಿ ಶಾಸಕ ಮುನಿಸ್ವಾಮಯ್ಯ, ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕ್ಷೇತ್ರದ ಪ್ರಮುಖ ಮುಖಂಡರು, ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಸಂಘ ಸಂಸ್ಥೆಗಳ ಪದಾಕಾರಿಗಳು ಹಾಜರಿದ್ದರು. ಎಲ್ಲರೂ ಸೇರಿ ಉಪಹಾರ ಸೇವಿಸಿದ್ದೇವೆ. ವಿಶ್ವನಾಥ್ ಒಳ್ಳೆಯ ಆತಿಥ್ಯ ನೀಡಿದ್ದಾರೆ ಎಂದರು.

ಇದೇ ವೇಳೆ ವಿಶ್ವನಾಥ್ ಅವರು ತಮ್ಮೊಂದಿಗೆ ಚರ್ಚೆ ಮಾಡಿ, ನಾನು ವಿಧಾನಸಭಾ ಚುನಾವಣೆಯಲ್ಲಿ ಮಾಡಿದಷ್ಟೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಯಲಹಂಕದಲ್ಲಿ ತೊಡಗಿಸಿಕೊಂಡು ಹೆಚ್ಚು ಮತ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ನಾನು ಕೂಡ ಅವರ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ.

ಅವರ ಕಾರ್ಯಕರ್ತರು ಮತ್ತು ಮುಖಂಡರನ್ನು ಅತ್ಯಂತ ನಂಬಿಕೆ ಹಾಗೂ ವಿಶ್ವಾಸದಿಂದ ನಡೆಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದೇನೆ. ವಿಶ್ವನಾಥ್ ಅವರು ಮೋದಿಯವರನ್ನು ಗೆಲ್ಲಿಸಿ, ಮೂರನೇ ಬಾರಿಗೆ ಪ್ರಧಾನಿಯಾಗಿ ಮಾಡಲು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದರು.

ನನ್ನ ಮುಂದೆ ವಿಶ್ವನಾಥ್ ಅವರು ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ರಾಜಕಾರಣ ಕೊಡ-ಕೊಳ್ಳುವ ವ್ಯವಹಾರವಲ್ಲ. ಪರಸ್ಪರ ವಿಶ್ವಾಸ, ನಂಬಿಕೆ. ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯುವ ಕೆಲಸವನ್ನು ಅವರು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ನಾನೂ ಅವರ ಜೊತೆ ಸೇರಿಕೊಂಡು ಇದನ್ನು ಮಾಡುತ್ತೇನೆ.

ನಾಳೆ ಮೂರನೇ ಸೆಟ್ ನಾಮಪತ್ರ ಸಲ್ಲಿಸುತ್ತಿದ್ದೇನೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರಿಗೆ ಆಹ್ವಾನ ನೀಡಿದ್ದೇನೆ. ಯಲಹಂಕ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ. ವಿಶ್ವನಾಥ್ ಅವರು ಅದರಲ್ಲಿ ಭಾಗವಹಿಸುತ್ತಾರೆ. ಎಂಟು ಕ್ಷೇತ್ರಗಳ ಮುಖಂಡರನ್ನು ಭೇಟಿ ಮಾಡಿದ ಬಳಿಕ ನನ್ನ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.

RELATED ARTICLES

Latest News