ಬೆಂಗಳೂರು,ಡಿ.7- ಕಲಬುರಗಿಯ ಜೈಲಿನಲ್ಲಿ ಗಾಂಜಾ, ಬೀಡಿ, ಸಿಗರೇಟು ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿರುವ ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆಗಾಗಿ ತನಿಖೆ ನಡೆಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮಾಧ್ಯಮದ ವರದಿಯನ್ನು ಗಮನಿಸಿದ್ದೇನೆ. ಬಂಧೀಖಾನೆಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಚರ್ಚೆ ನಡೆಸಿ ತನಿಖೆಗೆ ಆದೇಶಿಸಲಾಗುವುದು ಎಂದರು.
ಜೈಲಿನ ಸುಧಾರಣೆಗಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ವೈರಲ್ ಆಗುತ್ತಿರುವ ಆಡಿಯೋ ನಿಜವೇ ಆಗಿದ್ದರೆ ಜೈಲಿನ ಅಧೀಕ್ಷಕರು ಹಾಗೂ ಇತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಡಿಯೋದಲ್ಲಿ ಕಂಡುಬರುತ್ತಿರುವ ರಾಶಿರಾಶಿ ಮದ್ಯದ ಬಾಟಲಿಗಳು, ಐಶಾರಾಮಿ ವ್ಯವಸ್ಥೆ, ಮೊಬೈಲ್ ಬಳಕೆ ಸೇರಿದಂತೆ ಇತರ ಎಲ್ಲಾ ವಿಚಾರಗಳ ವಾಸ್ತವಾಂಶಗಳನ್ನು ಪರಿಶೀಲನೆ ಮಾಡಬೇಕಿದೆ ಎಂದು ತಿಳಿಸಿದರು.
ಮೈಸೂರಿನ ಮುಡಾ ಪ್ರಕರಣದಲ್ಲಿ ನಿವೇಶನಗಳ ಅಪಮೌಲ್ಯವನ್ನು ಉಲ್ಲೇಖಿಸಿ ನೋಂದಣಿ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ತಮಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿ ಲೋಕಾಯುಕ್ತಕ್ಕೆ ತಿಳಿಸಿದೆ ಎಂದರು. ದಿನನಿತ್ಯ ಹೊರಬರುತ್ತಿರುವ ಮಾಹಿತಿಗಳ ಸತ್ಯಾಸತ್ಯತೆ ಕುರಿತು ಲೋಕಾಯುಕ್ತರು ಗಮನಿಸುತ್ತಾರೆ. ಅಧಿಕೃತವಲ್ಲದ ಮಾಹಿತಿಗಳ ಹಾಗೂ ಹೇಳಿಕೆಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದು ಸೂಕ್ತ ಅಲ್ಲ ಎಂದು ಹೇಳಿದರು.
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ ಬಳಿಕ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಮರ್ಥರಿದ್ದಾರೆ. ಈ ಸಂಬಂಧಪಟ್ಟಂತೆ ನನಗೆ ಯಾವುದೇ ವಿಚಾರಗಳು ಗೊತ್ತಿಲ್ಲ. ಪೊಲೀಸ್ ಇಲಾಖೆಗೆ ಸಂಬಂಧಪಟ್ಟದ್ದಾದರೆ ನಾನು ಸಹಕರಿಸುತ್ತೇನೆ. ಬೇರೆ ಸಚಿವರ ಖಾತೆಗಳ ವಿಚಾರಗಳಿಗೆ ನಾನು ಹೇಳಿಕೆ ನೀಡುವುದು ಸರಿಯಾಗುವುದಿಲ್ಲ ಎಂದರು.
ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ಬಳ್ಳಾರಿಗೆ ಕಳುಹಿಸಿ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.