Thursday, July 4, 2024
Homeರಾಷ್ಟ್ರೀಯತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ

ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ

ಕಲ್ಲುಕುರಿಚಿ,ಜೂ.20- ತಮಿಳುನಾಡಿನ ಕಲ್ಲುಕುರಿಚಿ ಜಿಲ್ಲೆಯ ಕರುಣಾಪುರಂನಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿರುವವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.ನಕಲಿ ಮದ್ಯ ಸೇವನೆಯಿಂದ 20 ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಕಳವಳ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೆ.ಕಣ್ಣಾಕುಟ್ಟಿ(49) ಎಂಬುವರನ್ನು ಬಂಧಿಸಲಾಗಿದ್ದು, 200 ಲೀ. ನಕಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕರುಣಾಪುರಂನ ದಿನಗೂಲಿ ಕಾರ್ಮಿಕರು ಸೇರಿ 60ಕ್ಕೂ ಹೆಚ್ಚು ಜನ ಮಂಗಳವಾರ ರಾತ್ರಿ ಪ್ಯಾಕೆಟ್‌ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಸೇವಿಸಿದ್ದು, ಮನೆಗೆ ತಲುಪಿದ ನಂತರ ಮದ್ಯ ಸೇವಿಸಿದ ಹೆಚ್ಚಿನವರಲ್ಲಿ ತಲೆ ತಿರುಗುವಿಕೆ, ವಾಂತಿ, ಹೊಟ್ಟೆನೋವು ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಂತಹ ಸಮಸ್ಯೆಗಳು ಕಂಡುಬಂದಿವೆ.

ಕೂಡಲೇ ಅವರನ್ನು ಕಲ್ಲುಕುರಿಚಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ 10 ಜನ ಸಾವನ್ನಪ್ಪಿದ್ದು, ತಡರಾತ್ರಿ ಆರು ಮಂದಿ ಸಾವನ್ನಪ್ಪಿದ್ದಾರೆ.ಇಂದು ಬೆಳಿಗ್ಗೆ ಸಾವಿನ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ. 20 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಸಿಐಡಿ ತನಿಖೆಗೆ :
ನಕಲಿ ಮದ್ಯ ದುರಂತಕ್ಕೆ ಮುಖ್ಯಮಂತ್ರಿ ಸ್ಟಾಲಿನ್‌ ಆಘಾತ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.ಪ್ರಕರಣ ಕುರಿತು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಕಲ್ಲುಕುರಿಚಿ ದುರಂತ ತೀವ್ರ ಆಘಾತ ಉಂಟುಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಪೊಲೀಸ್‌‍ ಸಿಬ್ಬಂದಿಯನ್ನೂ ಕೂಡ ಅಮಾನತು ಮಾಡಲಾಗಿದೆ.ತಮಿಳುನಾಡು ರಾಜ್ಯಪಾಲರಾದ ಆರ್‌.ವಿ.ರವಿ ಸಹ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿಸಿ ವರ್ಗಾವಣೆ :
ಇಡೀ ತಮಿಳುನಾಡನ್ನೇ ಬೆಚ್ಚಿಬೀಳಿಸಿರುವ ಘಟನೆ ಬಳಿಕ ಕಲ್ಲುಕುರಿಚಿ ಜಿಲ್ಲಾಧಿಕಾರಿ ಶ್ರವಣ್‌ಕುಮಾರ್‌ ಜಾಧವತ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎಂ.ಎಸ್‌‍.ಪ್ರಶಾಂತ್‌ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ.

ಎಸ್‌‍ಪಿ ತಾತ್ಕಾಲಿಕ ವಜಾ :
ಕಲ್ಲುಕುರಿಚಿ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸಮಯ್‌ಸಿಂಗ್‌ ಅವರನ್ನು ಅಮಾನತು ಮಾಡಲಾಗಿದೆ ಮತ್ತು ರಜತ್‌ ಚತುರ್ವೇದಿ ಅವರನ್ನು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

ಅಣ್ಣಾಮಲೈ ಖಂಡನೆ :
ನಕಲಿ ಮದ್ಯ ಹಾವಳಿ ತಡೆವಟ್ಟುವಲ್ಲಿ ಡಿಎಂಕೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಬಕಾರಿ ಸಚಿವ ಎಸ್‌‍.ಮುತ್ತುಸ್ವಾಮಿ ರಾಜೀನಾಮೆ ನೀಡಬೇಕೆಂದು ತಮಿಳುನಾಡು ರಾಜ್ಯ ಬಿಜೆಪಿ ಮುಖಂಡ ಅಣ್ಣಾಮಲೈ ಆಗ್ರಹಿಸಿದ್ದಾರೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅವರು, ದುರಂತದಲ್ಲಿ ಮಡಿದವರ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News