Thursday, June 5, 2025
Homeಮನರಂಜನೆಕ್ಷಮೆಯಾಚಿಸದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಕಮಲ್‌ ಹಾಸನ್‌

ಕ್ಷಮೆಯಾಚಿಸದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಕಮಲ್‌ ಹಾಸನ್‌

Kamal Haasan writes to Karnataka Film Chamber of Commerce without apologizing

ಬೆಂಗಳೂರು,ಜೂ.3- ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಕನ್ನಡ ಭಾಷೆಯು ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂಬುದರ ಬಗ್ಗೆ ಯಾರಿಗೂ ಅನುಮಾನ ಬೇಡ…

ಕನ್ನಡ ಭಾಷೆಯು ತಮಿಳು ಭಾಷೆಯಿಂದ ಉದಯವಾಯಿತು ಎಂದು ವಿವಾದಾತಕ ಹೇಳಿಕೆ ನೀಡಿ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಖ್ಯಾತ ನಟ ಕಮಲ್‌ ಹಾಸನ್‌ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬರೆದಿರುವ ಪತ್ರದ ಸಾರಾಂಶ ಇದು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರ ಬರೆದಿರುವ ಕಮಲ್‌ ಹಾಸನ್‌, ಕರ್ನಾಟಕದ ಇತಿಹಾಸ, ಕನ್ನಡ ಭಾಷೆ, ಇಲ್ಲಿನ ನೆಲ-ಜಲದ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಯೂ ತಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸದೆ ಮೊಂಡುತನವನ್ನೇ ಪ್ರದರ್ಶಿಸಿದ್ದಾರೆ. ಥಗ್‌ ಲೈಫ್‌ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.

ನನ್ನ ಉದ್ದೇಶದ ವಿರುದ್ಧವಾಗಿ ಅದನ್ನು ಅರ್ಥ ಮಾಡಿಕೊಳ್ಳಲಾಗಿದೆ. ನಾವೆಲ್ಲರೂ ಒಂದೇ ಕುಟುಂಬದವರು ಎಂಬುದು ನನ್ನ ಉದ್ದೇಶವಾಗಿತ್ತು. ಕನ್ನಡ ಭಾಷೆಯ ಹಿರಿಮೆಯನ್ನು ಕುಗ್ಗಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಭಾಷೆಯ ಶ್ರೀಮಂತ ಇತಿಹಾಸದ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ವಿವಾದವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡಿದ್ದಾರೆ.

ತಮಿಳಿನ ರೀತಿಯೇ ಕನ್ನಡ ಸಹ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಹೊಂದಿದ್ದು, ಅದನ್ನು ನಾನು ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು, ನನ್ನ ವೃತ್ತಿ ಜೀವನದಲ್ಲಿ ನನಗೆ ತೋರಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಪ್ರೀತಿ ಸ್ಪಟಿಕದಂಥಹದ್ದು, ಅದನ್ನು ನಾನು ಯಾವುದೇ ಭೀತಿ ಇಲ್ಲದೆ ಹೇಳುವೆ. ಅದರಂತೆ ಕನ್ನಡಿಗರಿಗೆ ಅವರ ಭಾಷೆಯ ಬಗ್ಗೆ ಇರುವ ಅದಮ್ಯ ಪ್ರೀತಿಯ ಬಗ್ಗೆಯೂ ನನಗೆ ಗೌರವ ಇದೆ ಎಂದಿದ್ದಾರೆ.

ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲ ಭಾಷೆಗಳ ಜೊತೆಗೆ ನನಗೆ ಇರುವ ನಂಟು ಅಭೇದ್ಯವಾದುದು. ಭಾಷೆಗಳ ಸಮಾನ ಗೌರವಕ್ಕಾಗಿ ನಾನು ಸದಾ ಒತ್ತಾಯಿಸಿದ್ದೇನೆ ಹಾಗೂ ಯಾವುದೇ ಒಂದು ಭಾಷೆಯ ಹೇರಿಕೆಯನ್ನು ಹಾಗೂ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಮಾಡುವ ದೌರ್ಜನ್ಯವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ದೇಶದ ಭಾಷಾ ಸಾಮರಸ್ಯವನ್ನು ಹಾಳು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ನಾನಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ. ಸಿನಿಮಾ ಭಾಷೆ ವಿಶ್ವಭಾಷೆ. ಆ ಭಾಷೆಗೆ ಪ್ರೀತಿಸುವುದು ಮಾತ್ರವೇ ಗೊತ್ತು. ನನ್ನ ಹೇಳಿಕೆ ಸಹ ನಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯ ಹಾಗೂ ಒಗ್ಗಟ್ಟನ್ನು ತೋರ್ಪಡಿಸುವ ಉದ್ದೇಶವನ್ನೇ ಹೊಂದಿತ್ತು. ನನ್ನ ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಗೌರವವನ್ನೇ ನಾನು ಪಾಲಿಸುತ್ತಿದ್ದೇನೆ.

ಅದೇ ಪ್ರೀತಿ ಮತ್ತು ಗೌರವದ ಭಾಗವಾಗಿ ಶಿವಣ್ಣ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಆ ಕಾರಣಕ್ಕಾಗಿ ಅವರು ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾದವಿದೆ ಎಂದಿದ್ದಾರೆ.

ಸಿನಿಮಾ ಜನರ ನಡುವೆ ಸೇತುವೆಯಾಗಿ ಇರಬೇಕು, ಜನರ ಬೇರ್ಪಡಿಸುವ ಗೋಡೆ ಆಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ. ಎಂದಿಗೂ ನೀಡಲು ಬಯಸುವುದಿಲ್ಲ. ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ, ಕರ್ನಾಟಕದ ಬಗ್ಗೆ, ಅದರ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನಗಿರುವ ನಿರಂತರ ಪ್ರೀತಿಯನ್ನು ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಮತ್ತೆ ಎತ್ತಿಹಿಡಿಯಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಅಂದು ಅವರು ಹೇಳಿದ್ದಾರೆ.

ಕಮಲ್‌ ಹಾಸನ್‌ ಚಿತ್ರ ಬಿಡುಗಡೆಗೆ ಒಳ ಒಪ್ಪಂದ: ಸಿ.ವಿ.ದೇವರಾಜ್‌
ತಮಿಳಿನಿಂದಲೆ ಕನ್ನಡ ಹುಟ್ಟಿದೆ ಎಂದು ಅಜ್ಞಾನ ಮತ್ತು ಅವೈಜ್ಞಾನಿಕ ಹೇಳಿಕೆ ನೀಡಿದ ಬಹಭಾಷಾ ನಟ ಕಮಲ್‌ ಹಾಸನ್‌ ಕ್ಷಮೆ ಕೇಳುವಂತೆ ಪದೇ ಪದೇ ದುಂಬಾಲು ಬೀಳುವುದು ಕನ್ನಡಿಗರ ಸ್ವಾಭಿಮಾನಕ್ಕೆ
ಅಪಮಾನ ಮಾಡಿದಂತೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕ ರಾಜ್ಯಾಧ್ಯಕ್ಷ ಸಿ. ವಿ. ದೇವರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಲವಾರು ಚಿತ್ರ ನಿರ್ಮಿಸಿ ಸೋತು ಸುಣ್ಣವಾಗಿರುವ ನಟ ಕಮಲ್‌ ಹಾಸನ್‌ ಬಿಡುಗಡೆಯಾಗಲಿರುವ ತನ್ನ ಹೊಸ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶದಿಂದ ಕನ್ನಡ ಭಾಷೆಯ ಕುರಿತು ಅಜ್ಞಾನದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ತನ್ನ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶವನ್ನು ಯಶಸ್ವಿಯಾಗಿ ಇಡೇರಿಸಿಕೊಂಡಿದ್ದಾರೆ ಎಂದರು.

ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಕಮಲ್‌ ಹಾಸನ್‌ ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬದಲು ಅವನಯಾವುದೇ ಚಿತ್ರ ಕನ್ನಡ ನೆಲದಲ್ಲಿ ಪ್ರದರ್ಶನ ಕಾಣದಂತೆ ಏಕತೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದ್ದಾರೆ.ತನ್ನ ಚಿತ್ರದ ವಾಣಿಜ್ಯ ಲಾಭಕ್ಕಾಗಿ ಕನ್ನಡ ಭಾಷೆ ಹೆಸರಿನಲ್ಲಿ ವಿವಾದ ಸೃಷ್ಟಿಸಿರುವ ಕಮಲ್‌ ಹಾಸನ್‌ ಅತ್ಯಂತ ಕೆಟ್ಟ ಮತ್ತು ಕೊಳಕು ಮನಸ್ಥಿತಿಯ ವಿಕೃತ್ತ ವ್ಯಕ್ತಿ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರ ವಿತರಕರು ಹಣದ ಆಸೆಗೆ ಬಲಿಯಾಗಿ ಯಾವುದೇ ಯಾವುದೇ ಕಾರಣಕ್ಕೂ ಕಮಲ್‌ ಹಾಸನ್‌ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು. ವಿತರಕರು ಕಮಲ್‌ ಹಾಸನ್‌ ಚಿತ್ರ ಹಂಚಿಕೆಯ ಒಪ್ಪಂದ ರದ್ದು ಪಡಿಸಬೇಕು. ವಿತರಕರೆ ಇಲ್ಲದಿದ್ದರೆ ಚಿತ್ರ ಹೇಗೆ ಬಿಡುಗಡೆಯಾಗುತ್ತದೆ. ಒಂದು ವೇಳೆ ದುರಂಹಕಾರಿ ಕಮಲ್‌ ಹಾಸನ್‌ ಕ್ಷಮೆ ಕೇಳಿದರು ಸಹ ಥಗ್‌ ಲೈಫ್‌ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಿ.ವಿ.ದೇವರಾಜ್‌ ಒತ್ತಾಯಿಸಿದ್ದಾರೆ.

RELATED ARTICLES

Latest News