Monday, July 15, 2024
Homeಮನರಂಜನೆಸ್ಯಾಂಡಲ್‍ವುಡ್ ನಟ ನಾಗಭೂಷಣ್ ಅರೆಸ್ಟ್

ಸ್ಯಾಂಡಲ್‍ವುಡ್ ನಟ ನಾಗಭೂಷಣ್ ಅರೆಸ್ಟ್

ಬೆಂಗಳೂರು, ಅ.1- ಸ್ಯಾಂಡಲ್‍ವುಡ್ ನಟರೊಬ್ಬರು ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್‍ಮೆಂಟ್ ನಿವಾಸಿ ಪ್ರೇಮಾ(48) ಮೃತಪಟ್ಟ ದುರ್ದೈವಿ. ಇವರ ಪತಿ ಕೃಷ್ಣಾ(58) ಗಂಭೀರ ಗಾಯಗೊಂಡಿದ್ದು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 9.45ರ ಸುಮಾರಿನಲ್ಲಿ ಪ್ರೇಮಾ ಹಾಗೂ ಕೃಷ್ಣ ದಂಪತಿ ವಸಂತಪುರ ಮುಖ್ಯರಸ್ತೆಯ ತಮ್ಮ ಅಪಾರ್ಟ್‍ಮೆಂಟ್ ಹತ್ತಿರ ಫುಟ್‍ಪಾತ್ ಮೇಲೆ ನಡೆದುಕೊಂಡು ಕೋಣನಕುಂಟೆ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಕಾರು ಚಾಲನೆ ಮಾಡಿಕೊಂಡು ನಟ ನಾಗಭೂಷಣ್ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡರು.

ತಕ್ಷಣ ದಂಪತಿಯನ್ನು ಸಮೀಪದ ಅಸ್ಟ್ರಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಪ್ರೇಮಾ ಅವರ ತಲೆಗೆ ಗಂಭೀರ ಪೆಟ್ಟಾಗ ತೀವ್ರ ರಕ್ತಸ್ರಾವವಾಗಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೃಷ್ಣ ಅವರ ಎರಡು ಕಾಲು, ಹೊಟ್ಟೆ ಭಾಗ ಹಾಗೂ ತಲೆಗೆ ಗಂಭೀರ ಪೆಟ್ಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ನಾಗಭೂಷಣ್ ಬಂಧನ: ದಂಪತಿಯ ಮಗ ಪಾರ್ಥ ಎಂಬುವರು ನ್ಯೂಟ್ರೀನೋಸ್ ಕಂಪೆನಿಯ ಉದ್ಯೋಗಿಯಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ನಟ ನಾಗಭೂಷಣ್‍ನನ್ನು ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News