Thursday, December 12, 2024
Homeಬೆಂಗಳೂರುಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದ ವತಿಯಿಂದ ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿರುವುದು ಶ್ಲಾಘನೀಯ. ಆಂಗ್ಲಭಾಷೆಯಷ್ಟೇ ಅಲ್ಲ, ಕನ್ನಡಕ್ಕೂ ಹೆಚ್ಚಿನ ಆದ್ಯತೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊಡಲಾಗುತ್ತಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ, ಅಷ್ಟೇ ಅಲ್ಲದೆ, ನಮ್ಮ ಕರ್ನಾಟಕದ ಪರಂಪರೆಯನ್ನು ಜಾಗತಿಕವಾಗಿ ಪಸರಿಸಲು ಕಲಾಪ್ರದರ್ಶನ ಏರ್ಪಡಿಸಿರುವುದು ಕೂಡ ಉತ್ತಮ ಕೆಲಸ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪ್ರಮುಖವಾಗಿ ಟರ್ಮಿನಲ್‌2 ಮುಂಭಾಗ ವಿಶೇಷ ಕನ್ನಡ ಚಟುವಟಿಕೆಗಳನ್ನು ನಡೆಸಲಾಯಿತು. ಕರ್ನಾಟಕದ ಸಾಂಪ್ರದಾಯಿಕ ಜಾನಪದ ಪ್ರಕಾರಗಳನ್ನು ಒಟ್ಟುಗೂಡಿಸುವ ಅದ್ಭುತ ನೃತ್ಯ ಪ್ರದರ್ಶನ, ವರ್ಣರಂಜಿತ ವೇಷಭೂಷಣ, ಸಂಗೀತ ಮತ್ತು ಕ್ರಿಯಾತ್ಮಕ ಚಲನೆಗಳು ಪ್ರೇಕ್ಷಕರನ್ನು ಆಕರ್ಷಿಸಿತು. ಇದಷ್ಟೇ ಅಲ್ಲದೆ, ಮಹಿಳಾ ಸ್ವ ಉದ್ಯೋಗಿಗಳೇ ನಿರ್ಮಿಸಿದ ಉಡುಪುಗಳ ಮಾರಾಟಕ್ಕೂ ಮಳಿಗೆಗಳನ್ನು ತೆರೆಯಲು ಟರ್ಮಿನಲ್‌ ೨ ಮುಂಭಾಗ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಮಳಿಗೆಗಳು ಮೈಸೂರು ರೇಷ್ಮೆ, ಉಡುಪಿ ಸೀರೆಗಳು, ಬಿದ್ರಿವೇರ್ ಮತ್ತು ಇಳಕಲ್ ಸೀರೆಗಳಂತಹ ಸೊಗಸಾದ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು. ಪ್ರವಾಸಿಗರಿಗೆ ಕರ್ನಾಟಕವನ್ನು ವ್ಯಾಖ್ಯಾನಿಸುವ ಕರಕುಶಲತೆ ಮತ್ತು ಸಂಪ್ರದಾಯದ ಬಗ್ಗೆ ಕಣ್ತುಂಬಿಕೊಳ್ಳಲು ಅವಕಾಶ ದೊರೆಯಿತು.

ಕಾರ್ಯಕ್ರಮವು ಕುಂಬಾರಿಕೆ, ಚನ್ನಪಟ್ಟಣದ ಆಟಿಕೆ ಚಿತ್ರಕಲೆ, ಬುಟ್ಟಿ ನೇಯ್ಗೆ ಮತ್ತು ಅನೇಕ ಸಂಪ್ರದಾಯತೆಯನ್ನು ಒಳಗೊಂಡಿತ್ತು, ನೇರಪ್ರಸಾರದ ಕಲಾ ಪ್ರದರ್ಶನವು ಜನರನ್ನು ಮನಸೂರೆಗೊಳಿಸಿತು. ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ ಪ್ರಯಾಣಿಕರು ಈ ಎಲ್ಲಾ ಕಲಾ ಪ್ರಕಾರಗಳನ್ನು ಅಚ್ಛರಿಯಿಂದ ಮನಸಾರೆ ಕಣ್ತುಂಬಿಕೊಂಡರು.

ಈ ಆಚರಣೆಯ ಮೂಲಕ, BLR ವಿಮಾನ ನಿಲ್ದಾಣವು ಕರ್ನಾಟಕದ ರೋಮಾಂಚಕ ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡುವ ತನ್ನ ಬದ್ಧತೆಯನ್ನು ಎತ್ತಿ ತೋರಿಸಿತು.

RELATED ARTICLES

Latest News