Thursday, May 2, 2024
Homeರಾಜ್ಯಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಬೆಂಗಳೂರು, ನ.1- ಬಸ್ ಗೆ ಬೆಂಕಿ ಹಚ್ಚುವುದರಲ್ಲಿ ಭಾಷೆ ಅಭಿಮಾನ ಇರುವುದಿಲ್ಲ. ರೈಲಿಗೆ ಬೆಂಕಿ ಹಚ್ಚುವುದರಲ್ಲಿ ರಾಜ್ಯದ ಅಭಿಮಾನ ಇರುವುದಿಲ್ಲ. ಈ ದೇಶದ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರಿಯಬೇಕು. ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಸರಾಯಿತು ಕರ್ನಾಟಕ ಉಸಿರಾಯಿತುಕನ್ನಡ, ಕರ್ನಾಟಕವೆಂದು ಹೆಸರಾಗಿ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಕನ್ನಡಿಗರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದರು.

ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿ ಆಗು, ಕನ್ನಡ ಜ್ಯೋತಿ ಬೆಳಗು ಜಗಕೆಲ್ಲ ಎಂಬ ಕವಿವಾಣಿಯನ್ನು ಸ್ಮರಿಸಿಕೊಂಡ ಅವರು, ಕನ್ನಡ.. ಕನ್ನಡಿಗ..ಕರ್ನಾಟಕ… ಈ ಮೂರಕ್ಕೂ ನವೆಂಬರ್ 1 ಕ್ಕೂ ಬಿಡಿಸಲಾರದ ನಂಟು. ಆದರೆ ಕನ್ನಡದ ಅಭಿಮಾನ ಬರೀ ನವೆಂಬರ್ 1 ಕ್ಕೆ ಸೀಮಿತ ಆಗದಿರಲಿ. ಕನ್ನಡ ಹೃದಯದ ಭಾಷೆಯಾಗಲಿ, ಕನ್ನಡ ಮನಸ್ಸಿನ ಭಾಷೆಯಾಗಲಿ ಎಂದರು.

ಅನೇಕ ಹಿರಿಯರು ಕನ್ನಡದ ಬಗ್ಗೆ ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಅಂಕುಶದಿಂದ ಚುಚ್ಚಿದರೂ ನಾನು ಹುಟ್ಟಿದ ಊರನ್ನು ಮರೆಯುವುದಿಲ್ಲ ಎಂದು ಪಂಪ ಹೇಳಿದ್ದಾರೆ. ಕುರಾನಿನಲ್ಲಿ ಹೇಳುತ್ತಾರೆ, ಸ್ವರ್ಗವು ತಂದೆ-ತಾಯಿಯ ಪಾದದ ಕೆಳಗೆ ಇದೆ ಎಂದು. ಅಂದರೆ ತಂದೆ-ತಾಯಿ ಸ್ಪರ್ಶಿಸಿದ ನೆಲವೇ ಸ್ವರ್ಗ ಎಂದು. ನಮಗೆ ಆ ಸ್ವರ್ಗ ಕರ್ನಾಟಕ. ತುಂಗಾ, ಭದ್ರಾ, ಕೃಷ್ಣ, ಕಾವೇರಿ ಹರಿಯುವ ಈ ತಾಯಿ ನೆಲವೇ ನಮಗೆ ಸ್ವರ್ಗ ಎಂದರು.

ಕನ್ನಡದಲ್ಲಿ ಬೇಡಿಕೊಂಡರೆ ಹರಿ ವರಗಳ ಮಳೆ ಗರೆಯುತ್ತಾನೆ. ಹರ ಮುನಿಯದೆ ಪೊರೆಯುತ್ತಾನೆ ಎಂದು ಕುವೆಂಪು ಹೇಳುತ್ತಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನ ನೆನೆಯೋಣ ಎಂದು ಕರೆ ನೀಡಿದ ಅವರು, 2000 ವರ್ಷಗಳ ಇತಿಹಾಸ ಇರುವ ಕನ್ನಡ ಮರೆತರೆ ತಾಯಿಯನ್ನು ಮರೆತಂತೆ ಎಂದು ನಾವು ಅರಿಯಬೇಕಿದೆ ಎಂದರು.

ನಾವು ಕೋಮು ದ್ವೇಷಕ್ಕೆ ಸಿಲುಕದೆ, ಕರ್ನಾಟಕದ ಮನಸ್ಸುಗಳನ್ನು ಒಡೆಯದೇ ಯಾವ ಹೊರಗಿನ ಶಕ್ತಿಗೂ ಹೆದರದೆ ಒಂದಾಗಿ ಬದುಕುತ್ತೇವೆ. ಸರ್ವಜನಾಂಗದ ಶಾಂತಿಯ ತೋಟ ಮರಳಿ ನಿರ್ಮಿಸುತ್ತೇವೆ ಎಂಬ ದೀಕ್ಷೆ ತೊಡೋಣ. ಬಹಳಷ್ಟು ಮಂದಿಯ ತ್ಯಾಗ ಮತ್ತು ಬಲಿದಾನದ ಫಲವೇ ಅಖಂಡ ಕರ್ನಾಟಕ. ಇದನ್ನು ಜೋಪಾನವಾಗಿ ಕಾಪಾಡಬೇಕು ಎಂದರು.

ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷ ಬೇಕು. ಆದರೆ ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡೀ ಜೀವಮಾನ ಸಾಲದು. ಕುವೆಂಪು ಅವರು ಹೇಳಿದಂತೆ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು. ಛಿದ್ರ ಮಾಡುವವರು ಈಗಲೂ ನಮ್ಮ ಸುತ್ತ ಇದ್ದಾರೆ. ಅವರಿಗೆ ಕುವೆಂಪು ಅವರ ಈ ಹಾಡನ್ನು ಕೇಳಿಸಬೇಕು ಎಂದರು.

ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕರ್ನಾಟಕ ನೆಲ, ಜಲ, ಭಾಷೆಯಿಂದ ಸಂವೃದ್ಧಗೊಂಡಿದೆ. ವ್ಯಾಪಕ ಉದ್ಯೋಗ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದ ಅಗತ್ಯ ಇರುವ ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ಕೋರಲಾಗುವುದು. 8311 ಹೊಸ ಕೊಠಡಿಗಳನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ. 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. 2024-25ನೇ ಸಾಲಿನಲ್ಲಿ 600 ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದರು.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಭಾರಿ ಪರೀಕ್ಷೆ ನಡೆಸಿ, ಸಾಧನೆ ಉತ್ತಮ ಪಡಿಸಲಾಗಿದೆ. ಅಪೌಷ್ಠಿಕತೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕ ಆಹಾರವಾಗಿ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಈ ವರ್ಷದಿಂದ 9 ಮತ್ತು 10ನೇ ತರಗತಿಯ ಮಕ್ಕಳಿಗೂ ಪೂರಕ ಆಹಾರ ನೀಡಲಾಗುತ್ತಿದೆ. ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ಹಾಲಿನೊಂದಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡಲು ಈ ತಿಂಗಳಿನಿಂದಲೇ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ಸಸ್ಯಶಾಮಲ ಯೋಜನೆಯಡಿ 50 ಲಕ್ಷ ಸಸಿ ನಡೆಸಲಾಗುತ್ತಿದೆ. ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಸಲಾಗುತ್ತಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ಶೇ.50ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಮಲೆನಾಡಿನ ಗಾಂಧಿ ಎಂದು ಹೆಸರಾಗಿರುವ ಹೆಚ್.ಜಿ.ಗೋವಿಂದೇಗೌಡರ ಹೆಸರಿನಲ್ಲಿ ಉತ್ತಮ ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಪ್ರಶಸ್ತಿಗಳು ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದವು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವನ್ನು ಪುನರಾರಂಭಿಸಲಾಗಿದ್ದು, ನಗದು ಪುರಸ್ಕಾರವನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಿಎಸ್‍ಆರ್ ನಿ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಿಜ್ಞಾನ್ ಅರ್ಷದ್ ಮಾತನಾಡಿ, ಕನ್ನಡ ನಾಡಿಗೆ ಅಕೃತವಾದ ಧ್ವಜ ಬೇಕಿದೆ. ಆರು ವರ್ಷದ ಹಿಂದೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸ್ಸನ್ನು ಆಧರಿಸಿ ನಾಡಿನ ಧ್ವಜಕ್ಕೆ ಮಾನ್ಯತೆ ದೊರೆಯಬೇಕು ಎಂದರು.

RELATED ARTICLES

Latest News