Saturday, May 18, 2024
Homeರಾಜ್ಯಕಾಂತರಾಜು ವರದಿ ತಿರಸ್ಕಾರಕ್ಕೆ ಒತ್ತಾಯ

ಕಾಂತರಾಜು ವರದಿ ತಿರಸ್ಕಾರಕ್ಕೆ ಒತ್ತಾಯ

ಬೆಂಗಳೂರು, ನ.3- ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಅನುಷ್ಠಾನಗೊಳಿಸಬಾರದು. ಒಂದು ವೇಳೆ ಸಮೀಕ್ಷೆಯ ಅಗತ್ಯವಿದ್ದರೆ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಒಕ್ಕಲಿಗರ ಸಮುದಾಯ ಮಾಡಿದೆ.

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ-ಮಂಥನ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ನಡೆಸಿ ಕಾಂತರಾಜು ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ.ವರದಿಯೂ ಅವೈಜ್ಞಾನಿಕವಾಗಿದ್ದು, ದೋಷ ಪೂರಿತವಾಗಿದೆ. ವರದಿ ಅನುಷ್ಠಾನವಾದರೆ ಕೇವಲ ಒಕ್ಕಲಿಗ ಸಮುದಾಯ ಅಷ್ಟೇ ಅಲ್ಲ, ಇತರೆ ಸಮುದಾಯಗಳಿಗೂ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಲ್ಲದೆ, ಮೀಸಲಾತಿಯಿಂದ ಸಮುದಾಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಘ- ಸಂಸ್ಥೆಗಳ ಜತೆಗೂಡಿ ಪಕ್ಷಾತೀತವಾಗಿ ಒಟ್ಟಾಗಿ ಒಕ್ಕಲಿಗ ಸಮುದಾಯದ ಹಿತರಕ್ಷಣೆಗೆ ಶ್ರಮಿಸಲು ನಿರ್ಧರಿಸಲಾಗಿದೆ.

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಚುಂಬಿಸಿ ಪರಾರಿಯಾದ ಕಿಡಿಗೇಡಿಗಳು

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ ಅವರು ಕಾಂತರಾಜು ಅಧ್ಯಕ್ಷರಾಗಿದ್ದ ಅವಯಲ್ಲಿ ತಯಾರಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯೂ ದೋಷಪೂರಿತವಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು, ಸ್ವೀಕರಿಸಿದರೂ ಅನುಷ್ಠಾನಗೊಳಿಸಬಾರದು. 8 ವರ್ಷಗಳ ಹಿಂದೆ ತಯಾರಿಸಿದ ವರದಿ ಅವೈಜ್ಞಾನಿಕವಾಗಿದೆ. ಒಂದು ವೇಳೆ ವರದಿ ಅನುಷ್ಠಾನಗೊಳಿಸಬೇಕೆಂದಾದರೆ, ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಪಡೆಯಲಿ. ಅಲ್ಲದೆ, ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸೌಜನ್ಯವಾಗಿ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶ್ರೀ ನಂಜಾವಧೂತ ಸ್ವಾಮೀಜಿ ಅವರು ಮಾತನಾಡಿ, ಕಾಂತರಾಜು ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ಒಕ್ಕಲಿಗ ಸಮುದಾಯಕ್ಕಿರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.16ಕ್ಕೆ ಹೆಚ್ಚಿಸಬೇಕು. ಹಿಂದಿನ ಸರ್ಕಾರದ ಅವಯಲ್ಲಿ ಪರಿಷ್ಕರಿಸಲಾಗಿದ್ದ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡು ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಎಸ್.ಟಿ.ಸೋಮಶೇಖರ್, ಆರಗಜ್ಞಾನೇಂದ್ರ, ಶಾಸಕರಾದ ರವಿಕುಮಾರ( ಗಣಿಗ), ಶರತ್ ಬಚ್ಚೇಗೌಡ, ಡಾ.ರಂಗನಾಥ, ಡಾ.ಮಂತರ್ ಗೌಡ, ಹೆಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಅ.ದೇವೇಗೌಡ, ದಿನೇಶ್ ಗೂಳಿಗೌಡ, ವೈ.ಎ.ನಾರಾಯಣಸ್ವಾಮಿ, ಕೆ.ಗೋವಿಂದರಾಜು,

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡರು, ಉಪಾಧ್ಯಕ್ಷರಾದ ಸಿ.ದೇವರಾಜು, ಎಲ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಜಯಮುತ್ತು, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡರು, ಖಜಾಂಚಿ ಸಿ.ಎಂ.ಮಾರೇಗೌಡರು ಸೇರಿದಂತೆ ಸಂಘದ ನಿರ್ದೇಶಕರು, ಗಣ್ಯರು ಚಿಂತನ-ಮಂಥನ ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

Latest News