ಬೆಂಗಳೂರು,ಜ.9- ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವೇಳೆ ಕೆಲವು ಮಾಲ್‍ಗಳು, ಅಂಗಡಿಗಳ ನಾಮಫಲಕ ಧ್ವಂಸಗೊಳಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಾಣಗೌಡ ಅವರು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
2017 ರ ಹಳೆ ಪ್ರಕರಣ ಸಂಬಂಧ ಮತ್ತೆ ವಶಕ್ಕೆ ಪಡೆದಿರುವ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. 2017 ರಲ್ಲಿ ಕರವೇ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮೆಟ್ರೋ ನಾಮಫಲಕಕ್ಕೆ ಮಸಿ ಬಳಿದ ಹಿನ್ನೆಲೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಅವರ ವಿರುದ್ಧ ದೂರು ದಾಖಲಾಗಿತ್ತು.
ಈ ಸಂಬಂಧ ಜಾಮೀನುರಹಿತ ವಾರೆಂಟ್ ಸಹ ಜಾರಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದೀಗ ನಾರಾಯಣಗೌಡ ಅವರನ್ನು ಕುಮಾರಸ್ವಾಮಿ ಲೇ ಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಕಡ್ಡಾಯ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಇತ್ತೀಚೆಗೆ ಕರವೇ ಕಾರ್ಯಕರ್ತರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾದರಹಳ್ಳಿ ಗೇಟ್ ಬಳಿ ಪ್ರತಿಭಟನೆ ನಡೆಸಿದ ಕರವೇ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮಾಲ್‍ಗಳು ಹಾಗೂ ಅಂಗಡಿಗಳ ನಾಮಫಲಕಗಳನ್ನು ಧ್ವಂಸಗೊಳಿಸಿ ಸಾರ್ವಜನಿಕರ ಆಸ್ತಿಪಾಸ್ತಿ ಹಾಳು ಮಾಡಿದ್ದರು.
ಡಿಸಿಎಂ ರೇಸ್ : ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೆಸರು ಮುನ್ನಲೆಗೆ
ಆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಕರವೇ ಅಧ್ಯಕ್ಷ ನಾರಾಯಣಗೌಡರು ಹಾಗೂ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಶನಿವಾರವೇ ಇವರ ಬಿಡುಗಡೆಯಾಗಬೇಕಿತ್ತು. ಆದರೆ ಪ್ರಕ್ರಿಯೆ ತಡವಾದ ಕಾರಣ ಇಂದು ಬೆಳಗ್ಗೆ ನಾರಾಯಣಗೌಡರು ಹಾಗೂ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕರ್ತರನ್ನು ಬಿಎಂಟಿಸಿ ಬಸ್‍ನಲ್ಲಿ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಕರಣವೊಂದರ ಸಂಬಂಧ ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಮತ್ತೆ ನಾರಾಯಣಗೌಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.