Monday, May 20, 2024
Homeರಾಜ್ಯSSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ

SSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ

ಬೆಂಗಳೂರು,ಮೇ9- ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿದ್ದರೆ, ಈ ಬಾರಿ ಅಗ್ರ ಶ್ರೇಯಾಂಕದಲ್ಲೂ ಹಿನ್ನಡೆ ಕಂಡುಬಂದಿದೆ. 39,034 ವಿದ್ಯಾರ್ಥಿಗಳು ಶೇ.90ರಿಂದ 100ರಷ್ಟು ಅಂಕ ಪಡೆದು ಎ+ ಅಗ್ರ ಶ್ರೇಯಾಂಕದಲ್ಲಿದ್ದು, ಶೇ.5.58ರಷ್ಟು ಫಲಿತಾಂಶ ಪಡೆದಿದ್ದಾರೆ. ಕಳೆದ ವರ್ಷ ಇದು ಶೇ.8.83ರಷ್ಟಿತ್ತು.

ಶೇ.80ರಿಂದ 89ರಷ್ಟು ಅಂಕ ಪಡೆದ ಎ ಶ್ರೇಣಿಯ ವಿದ್ಯಾರ್ಥಿಗಳ ಪ್ರಮಾಣ ಶೇ.12.39ರಷ್ಟಿದೆ. ಕಳೆದ ವರ್ಷ ಶೇ.21.38ರಷ್ಟು ಮಂದಿ ಸಾಧನೆ ಮಾಡಿದ್ದರು. ಶೇ.70ರಿಂದ 79ರಷ್ಟು ಬಿ+ ಅಂಕ ಗಳಿಸಿದ್ದ ಶೇ.16.09ರಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿದ್ದರೆ, ಹಿಂದಿನ ವರ್ಷ ಶೇ.25.41ರಷ್ಟು ಯಶಸ್ವಿಯಾಗಿದ್ದರು.

ಶೇ.60ರಿಂದ 69ರಷ್ಟು ಅಂಕ ಪಡೆದ ಬಿ ಶ್ರೇಣಿಯ ವಿದಾರ್ಥಿಗಳ ಸಂಖ್ಯೆ ಶೇ.19.90ರಷ್ಟು. ಕಳೆದ ವರ್ಷ ಶೇ.24.66ರಷ್ಟಿತ್ತು. ಸಿ+ ಮತ್ತು ಸಿ ಶ್ರೇಣಿಯಲ್ಲಿ ಏರಿಕೆ ಕಂಡುಬಂದಿದ್ದು, ಕ್ರಮವಾಗಿ ಶೇ.22.38, ಶೇ.23.66ರಷ್ಟು ಉತ್ತೀರ್ಣರಾಗಿದ್ದಾರೆ.ಈ ಬಾರಿ 785 ಸರ್ಕಾರಿ, 206 ಅನುದಾನಿತ, 1297 ಅನುದಾನ ರಹಿತ ಸೇರಿ 2,288 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಕಳೆದ ವರ್ಷ ಈ ಶಾಲೆಗಳ ಸಂಖ್ಯೆ 3,823ರಷ್ಟಿತ್ತು.

ಶೂನ್ಯ ಫಲಿತಾಂಶ ಪಡೆದ ಶಾಲೆಗಳು ಕಳೆದ ವರ್ಷ 34ರಷ್ಟಿದ್ದರೆ ಈ ಬಾರಿ 78ಕ್ಕೆ ಹೆಚ್ಚಾಗಿವೆ. ಇವುಗಳ ಪೈಕಿ ಸರ್ಕಾರಿ 3, ಅನುದಾನಿತ 13, ಅನುದಾನ ರಹಿತ 62 ಶಾಲೆಗಳು ಸೇರಿವೆ.

ರ್ಯಾಂಕ್‌ ವಿದ್ಯಾರ್ಥಿಗಳು:
ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಬನಶಂಕರಿ ಮೊದಲ ಹಂತದ ಹೋಲಿ ಚೈಲ್ಡ್ ಇಂಗ್ಲೀಷ್‌ ಶಾಲೆಯ ಮೇದಾ.ಪಿ ಶೆಟ್ಟಿ , ಮಧುಗಿರಿಯ ಶಿರಾ ತಾಲ್ಲೂಕಿನ ಶ್ರೀವಾಸವಿ ಇಂಗ್ಲೀಷ್‌ ಪ್ರೌಢಶಾಲೆಯ ಹರ್ಷಿತಾ.ಡಿ.ಎಂ, ದಕ್ಷಿಣಕನ್ನಡ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಇಂಗ್ಲೀಷ್‌ ಪ್ರೌಢಶಾಲೆಯ ಚಿನ್ಮಯ.ಜಿ.ಕೆ, ಚಿಕ್ಕೋಡಿಯ ಅಥಣಿ ತಾಲ್ಲೂಕಿನ ಶ್ರಮರತ್ನಶ್ರೀ ಶಾಲೆಯ ಸಿದ್ದಾಂತ್‌ ಗಾಡ್ಗೆ, ಸಿರಸಿಯ ಮಾರಿಕಾಂಬ ಸರ್ಕಾರಿ ಪದವಿಪೂರ್ವ ಕಾಲೇಜಿನ ದರ್ಶನ್‌ ಸೂರ್ಯ ಭಟ್‌, ಗೋಳಿಯ ಸಿದ್ದಿ ವಿನಾಯಕ ಶಾಲೆಯ ಚಿನ್ಮಯ್‌ ಶ್ರೀಪಾದ ಹೆಗಡೆ, ಶ್ರೀಶಾರದಾಂಬ ಶಾಲೆಯ ಶ್ರೀರಾಮ್‌.ಕೆ.ಎಂ ಅವರುಗಳು 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ.

RELATED ARTICLES

Latest News