Sunday, September 8, 2024
Homeರಾಜ್ಯವಿಧಾನಸಭೆ: ಧರಣಿಯನ್ನು ಹಿಂಪಡೆದ ಪ್ರತಿಪಕ್ಷಗಳು

ವಿಧಾನಸಭೆ: ಧರಣಿಯನ್ನು ಹಿಂಪಡೆದ ಪ್ರತಿಪಕ್ಷಗಳು

ಬೆಂಗಳೂರು, ಜು.22- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕಳೆದ ಗುರುವಾರದಿಂದ ವಿಧಾನಸಭೆಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಪ್ರತಿಪಕ್ಷಗಳು ಇಂದು ವಾಪಸ್ಸು ಪಡೆದವು.

ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡ ಕೂಡಲೇ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಶುಕ್ರವಾರ ಸದನಕ್ಕೆ ಸಕಾಲಕ್ಕೆ ಆಗಮಿಸಿದ ಶಾಸಕರ ಹೆಸರನ್ನು ವಾಚಿಸಿದರು.

ಮುಖ್ಯಮಂತ್ರಿಯವರು ಗುರುವಾರ ಉತ್ತರ ನೀಡುವಾಗ ನೀವು ಧರಣಿ ಆರಂಭಿಸಿದ್ದೀರಿ. ಈಗಾಗಲೇ ನೀವು ಪ್ರಸ್ತಾಪ ಮಾಡಿದ ವಿಚಾರದ ಬಗ್ಗೆ ಮುಖ್ಯಮಂತ್ರಿ ಉತ್ತರ ಕೊಟ್ಟಿದ್ದಾರೆ. ಸದನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಸಾರ್ವಜನಿಕ ಮಹತ್ವದ ವಿಚಾರಗಳಿವೆ. ಇಂದು ಗಮನ ಸೆಳೆಯುವ ಸೂಚನಗೆ ಆದ್ಯತೆ ಕೊಡಲಾಗಿದೆ. ಧರಣಿ ವಾಪಸ್ ಪಡೆದ ಸುಗಮ ಕಲಾಪ ನಡೆಸಲು ಸಹಕಾರ ನೀಡುವಂತೆ ಕೋರಿದರು.

ಆಗ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಆ ಹಣ ಮರಳಿ ಖಜಾನೆಗೆ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ವಿಚಾರವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಸದನದ ಹೊರಗೆ ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿಯವರು ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಉಳಿದೆಲ್ಲಾ ವಿಚಾರಕ್ಕೂ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡಿದ್ದೇವೆ. ಧರಣಿಯ ನಡುವೆ ಶುಕ್ರವಾರ ಸದನದಲ್ಲಿ ಮಾತನಾಡಿದ ವಿಚಾರವನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಇದು ಸದನಕ್ಕೆ ಅಗೌರವ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಯ ಅನಾಹುತದ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿತ್ತು. ಶುಕ್ರವಾರ ನಾವು ಧರಣಿಯಲ್ಲಿದ್ದೆವು. ನೀವು ಆ ವಿಚಾರದ ಚರ್ಚೆಗೆ ಅವಕಾಶ ಮಾಡಿಕೊಟ್ಟಿರಿ ಎಂದಾಗ ಆಡಳಿತ ಪಕ್ಷದ ಕೋನರೆಡ್ಡಿ, ಸಿಎಂ ರಾಜೀನಾಮೆ ಏಕೆ ಕೊಡಬೇಕು ಎಂದು ಆಕ್ಷೇಪ ಎತ್ತಿದರು.

ಇದಕ್ಕೆ ವಸತಿ ಸಚಿವ ಜಮೀರ್ ಅಹಮ್ಮದ್ ಧ್ವನಿಗೂಡಿಸಿ ಮಾತನಾಡಿದರು. ಮತ್ತೆ ಮಾತು ಮುಂದುವರೆಸಿದ ಆರ್.ಅಶೋಕ್ ಮಳೆಹಾನಿ ಪೀಡಿತ ಪ್ರದೇಶಗಳಿಗೆ ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸೇರಿ ಹಲವರು ಭೇಟಿ ನೀಡಿದ್ದೇವೆ. ರಾಜ್ಯದಲ್ಲಿ ಡೆಂೀ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಮರಣಮೃದಂಗ ಭಾರಿಸುತ್ತಿದೆ. ಮುಡಾ ಹಗರಣ ತೆಗೆದುಕೊಳ್ಳಬೇಕು. ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಚಾರ ಚರ್ಚೆಯಾಗಬೇಕು.

ಶೂನ್ಯ ವೇಳೆ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಸಭಾಧ್ಯಕ್ಷರ ವಿನಂತಿ ಮೇರೆಗೆ ಧರಣಿಯನ್ನು ವಾಪಸ್ ಪಡೆಯುತ್ತೇವೆ. ಆದರೆ ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮಾಡುತ್ತೇವೆ ಎಂದು ಹೇಳಿ ತಮ್ಮ ಸ್ವಸ್ಥಾನಗಳತ್ತ ತೆರಳಿ, ನಂತರ ಸದನದಿಂದ ಹೊರನಡೆದರು.

ಬಿಜೆಪಿಯ ಶಾಸಕ ಸುನಿಲ್‍ಕುಮಾರ್ ಮಾತ್ರ ಪ್ರಶ್ನೋತ್ತರ ಕಲಾಪದಲ್ಲಿ ಪಾಲ್ಗೊಂಡು ಪ್ರಶ್ನೆ ಕೇಳಿದರು.
ಕಾಂಗ್ರೆಸ್‍ನ ನಯನಾ ಮೋಟಮ್ಮ ಅವರು ತಾವು ನೀಡಿರುವ ನಿಯಮ 69 ರ ಸೂಚನೆಯ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ-ಜೆಡಿಎಸ್ ಶಾಸಕರು ಸದನದಿಂದ ಹೊರಹೋಗುತ್ತಿರುವುದನ್ನು ಗಮನಿಸಿದ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಇದ್ಯಾವುದಕ್ಕೂ ಕಿವಿಗೊಡದ ಸಭಾಧ್ಯಕ್ಷರ ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.

RELATED ARTICLES

Latest News