ಬೆಂಗಳೂರು,ಸೆ.24- ಕಾವೇರಿ ಉಳಿವಿಗಾಗಿ ರೈತಪರ ಸಂಘಟನೆಗಳು, ವಿವಿಧ ಸಂಘಟನೆಗಳು ಬೆಂಗಳೂರು ಬಂದ್‍ಗೆ ಸೆಪ್ಟೆಂಬರ್ 26 ರಂದು ರಾಜಧಾನಿ ಬೆಂಗಳೂರಿಗೆ ಕರೆ ಕೊಟ್ಟ ಬೆನ್ನಲ್ಲೇ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸೆ. 29 ರಂದು ಕರ್ನಾಟಕ ಬಂದ್ ಮಾಡಲು ಮುಂದಾಗಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕನ್ನಡ ಸೇನೆ ಕುಮಾರ್, ಕರವೇ ಅಧ್ಯಕ್ಷ ಪ್ರವೀಣ್‍ಶೆಟ್ಟಿ, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಹೋರಾಟವನ್ನು ರಾಜ್ಯಾದ್ಯಂತ ಮಾಡಬೇಕಾಗಿದೆ. ಅದಕ್ಕಾಗಿ ನಾವು ಕರ್ನಾಟಕ ಬಂದ್ ಮಾಡಿ ಸರ್ಕಾರದ ಗಮನ ಸೆಳೆಯಬೇಕು. ಹೀಗಾಗಿ ಬಂದ್ ಮಾಡಲು ನಿರ್ಧರಿಸಿದ್ದೇವೆ. ನಾಳೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 5 ದಿನ ಮಳೆ
ಕಾವೇರಿ ವಿವಾದದಲ್ಲಿ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಇದಕ್ಕಾಗಿ ನಾವೂ ಕೂಡ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಿನ್ನೆ ಹಲವು ಸಂಘಟನೆಗಳು ಬೆಂಗಳೂರು ಬಂದ್ ಮಾಡಲು ನಿರ್ಧರಿಸಿದ್ದಾರೆ. ಹೋರಾಟ ಬೆಂಗಳೂರಿಗೆ ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ ನಾಳೆ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು.
ಸೆ. 29 ಕ್ಕೆ ರಾಜ್ಯ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಮೊದಲಿನಿಂದಲೂ ಕಾವೇರಿ ವಿವಾದದಲ್ಲಿ ಅನ್ಯಾಯವಾಗುತ್ತಿದೆ, ಹೋರಾಟ ಕೂಡ ಅನಿವಾರ್ಯವಾಗಿದೆ. ಕನ್ನಡ ನಾಡು, ನುಡಿ, ಜಲದ ವಿಷಯದಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬಂದ್‍ಗೆ ಮುಂದಾಗಿದ್ದೇವೆ ಎಂದು ಸಾ.ರಾ.ಗೋವಿಂದ್ ತಿಳಿಸಿದರು.