Friday, May 3, 2024
Homeಬೆಂಗಳೂರುಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ

ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ

ಬೆಂಗಳೂರು, ಸೆ.28- ನಾಳೆಯ ಕರ್ನಾಟಕ ಬಂದ್‍ಗೆ ನಗರ ಸೇರಿದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆ ವರೆಗೆ ನಗರದಾದ್ಯಂತ ಸಿಆರ್‍ಪಿಸಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸ್ಥಳೀಯ ಪೊಲೀಸರ ಜತೆಗೆ ಎರಡು ಕಂಪೆನಿ ಆರ್‍ಎಎಫ್,
ಕೆಎಸ್‍ಆರ್‍ಪಿಯ 60, ಸಿಎಆರ್‍ನ 40 ತುಕಡಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಎಲ್ಲ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ಉಪ ವಿಭಾಗದ ಎಸಿಪಿಗಳು, ಎಲ್ಲ ವಿಭಾಗಗಳ ಡಿಸಿಪಿಗಳು, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ನಾಳೆ ಗಸ್ತಿನಲ್ಲಿರುತ್ತಾರೆ.

ಯಾವುದೇ ರೀತಿಯ ಸಣ್ಣಪುಟ್ಟ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಬಂದ್ ನಡೆಸುವುದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ. ಆದ್ದರಿಂದ ನಗರದಲ್ಲಿ ಯಾವುದೇ ರೀತಿಯ ಬಂದ್ ಮಾಡದಂತೆ ಸಂಘಟನೆಗಳಿಗೆ ಕೋರಲಾಗಿದೆ ಎಂದರು.

ಪ್ರತಿಭಟನೆ ನಡೆಸಲು ಫ್ರೀಡಂಪಾರ್ಕ್‍ನಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಯಾವುದೇ ಸಂಘಟನೆಗಳಿಗೆ ರ್ಯಾಲಿ, ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ. ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸುವುದು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್: ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ 5 ಕಂಪನಿ ಆರ್‍ಎಎಫ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆರ್‍ಎಎಫ್ ಪಡೆಯನ್ನು ಮಂಡ್ಯ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ನಿಯೋಜಿಸಲಾಗಿದೆ ಎಂದು ವಿವರಿಸಿದರು. ನಾಳೆ ಎಲ್ಲಾ ಜಿಲ್ಲಾ ಎಸ್‍ಪಿಗಳು, ವಲಯದ ಐಜಿಗಳು, ನಗರಗಳ ಆಯುಕ್ತರು ಗಸ್ತಿನಲ್ಲಿರುತ್ತಾರೆ. ಇಲಾಖೆಯ ಪ್ರತಿಯೊಬ್ಬರೂ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದೇವೆ. ಹಾಗಾಗಿ ಎಲ್ಲಾ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ ಎಂದರು.

ಸ್ಥಳೀಯ ಪೊಲೀಸರ ಜೊತೆಗೆ 5 ಕಂಪನಿ ಆರ್‍ಎಎಫ್, 250 ತುಕಡಿ ಕೆಎಸ್‍ಆರ್‍ಪಿ ಜೊತೆಗೆ ಡಿಎಆರ್ ಫ್ಲಟೂನ್ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಗಡಿಗಳಲ್ಲಿ ಹೆಚ್ಚಿನ ಭದ್ರತೆ: ರಾಜ್ಯದ ಗಡಿಗಳಲ್ಲಿಯೂ ಸಹ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. ಅದರಲ್ಲೂ ತಮಿಳುನಾಡಿನ ಗಡಿಯಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದೇವೆ. ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

RELATED ARTICLES

Latest News