ಬೆಂಗಳೂರು, ಜೂ.6- ಹಿಂದಿ ಭಾಷೆಯ ಹಮಾರೆ ಬಾರಾಹ್ ವಿವಾದಿತ ಚಲನಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ಸ್ವೀಕೃತವಾಗಿರುವ ಮನವಿಗಳಲ್ಲಿ ಹಮಾರೆ ಬಾರಾಹ್ ಚಲನಚಿತ್ರದ ಟ್ರೈಲರ್‌ನಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತಕ ಹಾಗೂ ಅವಹೇಳನಕಾರಿ ಅಂಶಗಳಿವೆ. ಈ ಚಿತ್ರ ಧರ್ಮ, ಜಾತಿಗಳ ನಡುವೆ ದ್ವೇಷ ಹುಟ್ಟಿಸುತ್ತದೆ.
ಕೋಮು ಸೌಹಾರ್ದತೆಗೆ ಹಾನಿಯುಂಟು ಮಾಡಿ, ಅಶಾಂತಿ ನಿರ್ಮಿಸುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಷಡ್ಯಂತ್ರವನ್ನು ಹೊಂದಿದೆ ಎಂದು ದೂರಲಾಗಿದೆ.ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುವ ಚಲನಚಿತ್ರ ಜೂನ್ 7ರಂದು ಬಿಡುಗಡೆಯಾಗುತ್ತಿದ್ದು, ಅದನ್ನು ನಿಷೇಧಿಸುವಂತೆ ಮುಸ್ಲಿಂ ಸಂಘಗಳು ಮನವಿ ಮಾಡಿದ್ದವು.
ರಾಜ್ಯ ಸರ್ಕಾರದ ಗೃಹ ಇಲಾಖೆ ಚಲನ ಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿ, ಪವಿತ್ರ ಗ್ರಂಥದ ಉಪದೇಶ ಹಾಗೂ ಸಂದೇಶಗಳ ಕುರಿತು ತಪ್ಪು ಅರ್ಥ ಬರುವಂತೆ ಚಿತ್ರ ನಿರ್ಮಿಸಲಾಗಿದೆ. ಚಿತ್ರ ಬಿಡುಗಡೆಗೆ ಅನುಮತಿ ನೀಡಿದರೆ ರಾಜ್ಯದಲ್ಲಿ ಶಾಂತಿ ಭಂಗವಾಗಲಿದೆ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಲು ಕರ್ನಾಟಕ ಸಿನಿಮಾ ರೆಗ್ಯೂಲೇಶನ್ ಆಕ್ಟ್ 1964ರ ಪ್ರಕಾರ ಸಂಬಂಧ ಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿವರಣೆ ಪಡೆಯಬೇಕಿದೆ. ಆದರೆ ಚಿತ್ರದ ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್.ಗುಪ್ತ, ಶಿಯೋ ಬಲಕ್‌ಸಿಂಗ್, ಸಂಜಯ್ ನಾಗಪಾಲ್, ನಿರ್ದೇಶಕ ಕಮಲ್‌ಚಂದ್ರ ಸೇರಿ ಮತ್ತಿತರರು ನೆರೆ ರಾಜ್ಯಗಳಲ್ಲಿದ್ದು, ನೋಟಿಸ್ ನೀಡಿ ವಿವರಣೆ ಪಡೆಯುವ ಪ್ರಕ್ರಿಯೆಗೆ ವಿಳಂಬವಾಗಲಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಮಾರೆ ಬಾರಾಹ್ ಚಲನಚಿತ್ರವನ್ನು ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾಮಂದಿರ, ಖಾಸಗಿ ಟಿವಿ ಚಾನೇಲ್‌ಗಳ ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.