ಬೆಂಗಳೂರು,ಮಾ.11- ಅನೈಸರ್ಗಿಕ ವಾಗಿ ಕೃತಕ ಬಣ್ಣ ಬರುವಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿರುವ ಕೆಂಪು ಕಾಟನ್ ಕ್ಯಾಂಡಿಗಳನ್ನು ನಿಷೇಧಿಸಲಾಗುತ್ತಿದೆ. ಅದೇ ರೀತಿ ಗೋಬಿ ಮಂಚೂರಿ ಪದಾರ್ಥ ಮೇಲೂ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಗುಣಮಟ್ಟ ಕೃತಕ ಬಣ್ಣ ಬೆರೆಸುವಿಕೆಯಿಂದಾಗಿ ಕಳಪೆಯಾಗಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೊಳಪಡಿಸಲಾಗಿದೆ ಎಂದು ಹೇಳಿದರು.
ಟಾರ್‍ಟ್ರಾಸೈನ್, ಸನ್‍ಸೆಟ್ ಯೆಲ್ಲೋ, ಕಾರ್ಮೋಸಿನ್ ಮತ್ತು ರೋಡಮೈನ್-ಬಿ ಇವುಗಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ರೋಡಮೈನ್-ಬಿ ಯಾವುದೇ ಆಹಾರ ಪದಾರ್ಥಗಳಲ್ಲೂ ಬಳಕೆ ಮಾಡದಂತಹ ನಿಷೇತ ಅಪಾಯಕಾರಿ ಆಹಾರ ಪದಾರ್ಥವಾಗಿದೆ. ಇನ್ನು ಟಾರ್‍ಟ್ರಾಸೈನ್, ಸನ್‍ಸೆಟ್ ಯೆಲ್ಲೊ ಮತ್ತು ಕಾರ್ಮೋಸಿನ್ ರಾಸಾಯನಿಕಗಳನ್ನು ನಿಗದಿತ ಆಹಾರ ಪದಾರ್ಥಗಳಲ್ಲಿ ಪ್ಯಾಕಿಂಗ್ ಮಾಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಲು ಅವಕಾಶ ಇದೆ.
ಹೊಸದಾಗಿ ತಯಾರಿಸಲಾಗುವ ಪದಾರ್ಥಗಳಲ್ಲಿ ಇವುಗಳನ್ನು ಬಳಸಲು ಅವಕಾಶವಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಜ್ಯಾದ್ಯಂತ 171 ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೊಳಪಡಿಸಿದಾಗ 107 ಮಾದರಿಗಳಲ್ಲಿ ಅಸುರಕ್ಷಿತವಾದ ಕೃತಕ ಬಣ್ಣಗಳನ್ನು ಬಳಸಲಾಗಿದೆ. 64 ರಲ್ಲಿ ಕೃತಕ ಬಣ್ಣಗಳಿಲ್ಲದೆ ಸುರಕ್ಷಿತ ಮಾದರಿಗಳನ್ನು ಅನುಸರಿಸಲಾಗಿದೆ ಎಂದರು. ಕಾಟನ್ ಕ್ಯಾಂಡಿಯ 25 ಮಾದರಿಗಳನ್ನು ಸಂಗ್ರಹಿಸಿದಾಗ ಅವುಗಳ ಪೈಕಿ 15 ಮಾದರಿಗಳಲ್ಲಿ ಅಸುರಕ್ಷಿತವಾದ ರೋಡಮೈನ್-ಬಿ ಬಳಸಿರುವುದು ಸಾಬೀತಾಗಿದೆ ಎಂದು ವಿವರಿಸಿದರು.
ಆಹಾರ ಸುರಕ್ಷತೆ ಮತ್ತು ಗುಣದರ್ಜೆ ಕಾಯ್ದೆ 2006ರನ್ವಯ 7 ವರ್ಷದಿಂದ ಜೀವಾವವರೆಗೂ ಶಿಕ್ಷೆ ವಿಸಲು ಅವಕಾಶವಿದೆ. ಆಹಾರ ಸುರಕ್ಷತಾ ಇಲಾಖೆ ಅಸೂಚನೆ ಹೊರಡಿಸಿದ್ದು, ಇಂದಿನಿಂದ ಅಪಾಯಕಾರಿ ರಾಸಾಯನಿಕ ಬಳಕೆ ಮಾಡುವ ಬಣ್ಣದ ಕಾಟನ್ ಕ್ಯಾಂಡಿಗಳನ್ನು ನಿಷೇಸುತ್ತಿದೆ. ಬಣ್ಣರಹಿತವಾದ ಕ್ಯಾಂಡಿಗಳ ಮಾರಾಟ ಅಥವಾ ಬಳಕೆಗೆ ಯಾವುದೇ ನಿಷೇಧವಿಲ್ಲ ಎಂದು ಹೇಳಿದರು.
ಗೋಬಿ ಮಂಚೂರಿಗಳಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಸುವುದನ್ನು ಪತ್ತೆ ಹಚ್ಚಲು ನಿರಂತರ ಕಾರ್ಯಾಚರಣೆ ನಡೆಸಲಾಗುವುದು. ಇದಕ್ಕಾಗಿ ಅಧಿಕಾರಿಗಳ ತಂಡ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಆಹಾರ ಸುರಕ್ಷಿತಾ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು.
ಬೀದಿ ಬದಿಯ ವ್ಯಾಪಾರಿಗಳು ಮಾತ್ರವಲ್ಲದೆ, ರೆಸ್ಟೋರೆಂಟ್, ಸ್ಟಾರ್ ಹೋಟೆಲ್‍ಗಳಲ್ಲೂ ತಪಾಸಣೆ ಮತ್ತು ಮಾದರಿ ಸಂಗ್ರಹ ಮಾಡುವುದಾಗಿ ತಿಳಿಸಿದರು. ಅಡುಗೆಗೆ ಬಳಸುವ ಖಾದ್ಯ ತೈಲದ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಲಾಗುತ್ತದೆ. ಕೆಲವು ಹೋಟೆಲ್‍ಗಳಲ್ಲಿ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು. ಆಹಾರ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.