Sunday, November 24, 2024
Homeರಾಜ್ಯಸೋಮವಾರ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಸೋಮವಾರ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು,ಮಾ.9- ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 7 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಇದೀಗ ಬಿಜೆಪಿ ಕೂಡಾ ತನ್ನ ಹುರಿಯಾಳುಗಳನ್ನು ಅಂತಿಮಗೊಳಿಸಿದ್ದು, ಬಹುತೇಕ ನಾಳೆ ಅಥವಾ ಸೋಮವಾರ ಪ್ರಕಟಗೊಳ್ಳುವ ಸಂಭವವಿದೆ. ನಾಳೆ ನವದೆಹಲಿಯಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಲಿದ್ದು, ಕರ್ನಾಟಕದ 20 ಸ್ರ್ಪಧಿಗಳ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಎರಡನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.

ಇದೇ ಸಂದರ್ಭದಲ್ಲಿ ಕರ್ನಾಟಕದ 18 ರಿಂದ 20 ಲೋಕಸಭಾ ಕ್ಷೇತ್ರಗಳನ್ನೂ ಒಳಗೊಂಡಂತೆ ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿ ಬರುವ ಸೋಮವಾರ ಅಥವಾ ಮಂಗಳವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಸರತ್ತು ನಡೆಸಿದ್ದಾರೆ.

ಆ ಕಸರತ್ತಿನ ಬಳಿಕ ಕೆಲವು ಕ್ಷೇತ್ರಗಳಿಗೆ ಒಂದು ಹೆಸರು, ಇನ್ನು ಕೆಲವು ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳ ಪಟ್ಟಿಯನ್ನು ಸಾಧಕ-ಬಾಧಕಗಳೊಂದಿಗೆ ವರಿಷ್ಠರಿಗೆ ನೀಡಲಾಗಿದೆ. ಈ ಪಟ್ಟಿಯನ್ನು ಮುಂದಿಟ್ಟುಕೊಂಡು ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ.ಸಂತೋಷ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನೊಳಗೊಂಡ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ.

ಈಗಾಗಲೇ ಕಳೆದ ವಾರ ಪ್ರಕಟಿಸಿದ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 195 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಇದೀಗ ಭಾನುವಾರದ ಸಭೆಯ ಬಳಿಕ ಎರಡನೇ ಪಟ್ಟಿ ಅಂತಿಮಗೊಳಿಸಿ ಸೋಮವಾರ ಅಥವಾ ಮಂಗಳವಾರ ಬಿಡುಗಡೆ ಮಾಡುವ ಉದ್ದೇಶವಿದೆ. ಇದರಲ್ಲಿ ರಾಜ್ಯದ ಒಟ್ಟು 28 ಲೋಕಸಭಾಕ್ಷೇತ್ರಗಳ ಪೈಕಿ ಗೊಂದಲವಿಲ್ಲದ ಅಥವಾ ಇತ್ಯರ್ಥಗೊಳ್ಳುವ 18 ರಿಂದ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಿತ್ರ ಪಕ್ಷ ಜೆಡಿಎಸ್‍ಗೆ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದ್ದು, ಅಧಿಕೃತವಾಗಿ ಅಂತಿಮಗೊಂಡಿಲ್ಲ. ಈ ಸಂಬಂಧ ಮಾತುಕತೆ ನಡೆಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಆ ಮಾತುಕತೆ ವಿಳಂಬವಾದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳ ಬಗ್ಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಿಲ್ಲ. ಅಂಥ ನಾಲ್ಕೈದು ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಬಹುದು ಎನ್ನಲಾಗಿದೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಲ್ಲಾ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಾದ ಸ್ಥಾನಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ವರದಿಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಸಮೀಕ್ಷೆಗಳನ್ನು ತಾಳೆ ಹಾಕಲಾಗಿದೆ. ಪ್ರತಿ ಕ್ಷೇತ್ರದ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಪಡೆಯಲಾಗಿದೆ. ಮಾತುಕತೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ಕೂಡ ಬಿಜೆಪಿ ಹೈಕಮಾಂಡ್ ಸಭೆ ನಡೆಸಿದೆ. ಆದರೆ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? ಯಾರಿಗೆ ಕೊಕ್ ನೀಡಲಾಗುತ್ತದೆ? ಯಾರಿಗೆ ಮತ್ತೆ ಟಿಕೆಟ್ ಸಿಗುತ್ತದೆ ಎಂಬ ಗುಟ್ಟನ್ನು ಅಮಿತ್ ಶಾ ಬಿಟ್ಟುಕೊಟ್ಟಿಲ್ಲ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಪಾಲಾಗುವ ಸಂಭವ ಹೆಚ್ಚಿದೆ. ಈ ಬಗ್ಗೆ ಬಿಜೆಪಿ ಸಿಇಸಿ ಸಭೆಯಲ್ಲಿ ಚರ್ಚೆ ನಡೆದಿದೆ. ಮೂರು ದಿನಗಳ ಕಾಲ ದೆಹಲಿಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಮತ್ತಿತರ ನಾಯಕರು ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸಾಗಿದ್ದಾರೆ. ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.

ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವರುಗಳಾದ ಡಾ.ಕೆ.ಸುಧಾಕರ್, ಸಿ.ಟಿ.ರವಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳಿಗೆ ಟಿಕೆಟ್ ಸಿಗುವುದರ ಬಗ್ಗೆ ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದೇ ರೀತಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್‍ಕಟೀಲ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರುಗಳ ರಾಜಕೀಯ ಭವಿಷ್ಯವೂ ಏನಾಗಲಿದೆ ಎಂಬುದರ ಬಗ್ಗೆ ತೀರ್ಮಾನವಾಗಲಿದೆ.

ಯಾರಿಗೆ ಕೊಕ್ ಸಾಧ್ಯತೆ? :
ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ), ದೇವೇಂದ್ರಪ್ಪ (ಬಳ್ಳಾರಿ), ಮಂಗಳಾ ಅಂಗಡಿ (ಬೆಳಗಾವಿ), ಜಿಎಸ್ ಬಸವರಾಜು (ತುಮಕೂರು), ಶಿವಕುಮಾರ್ ಉದಾಸಿ (ಹಾವೇರಿ), ರಮೇಶ್ ಜಿಗಜಿಣಗಿ (ವಿಜಯಪುರ), ಸಂಗಣ್ಣ ಕರಡಿ (ಕೊಪ್ಪಳ), ನಾರಾಯಣಸ್ವಾಮಿ (ಚಿತ್ರದುರ್ಗ), ರಾಜÁ ಅಮರೇಶ್ವರ ನಾಯಕ್ (ರಾಯಚೂರು).


ಘೋಷಣೆಯಾಗಬಹುದಾದ ಕ್ಷೇತ್ರಗಳು :
ಶಿವಮೊಗ್ಗ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ, ಬಳ್ಳಾರಿ, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ತುಮಕೂರು, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ.

RELATED ARTICLES

Latest News