ಬೆಂಗಳೂರು,ನ.12- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾಗಿರುವುದು ಪಕ್ಷದೊಳಗಿನ ಹಿರಿಯರಿಗೆ ಮುನಿಸು ತಂದಿದ್ದು ಇದು ಕಮಲದಲ್ಲಿ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ. ನೇಮಕಾತಿ ಆದೇಶ ಹೊರಬಿದ್ದು, ಎರಡು ದಿನಗಳು ಕಳೆದರೂ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಅನೇಕರು ಒಂದೇ ಒಂದು ಶುಭಾಷಯವನ್ನೂ ಕೋರದೆ ಒಳಗೊಳಗೆ ಕುದಿಯುತ್ತಿದ್ದಾರೆ.
ವರಿಷ್ಠರ ಆದೇಶವನ್ನು ಪ್ರಶ್ನಿಸಲು ಆಗದೆ, ಒಪ್ಪಿಕೊಳ್ಳಲು ಆಗದೆ ಅನೇಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದು, ಮುಂದಿನ ನಮ್ಮ ರಾಜಕೀಯ ಭವಿಷ್ಯವೇನು ಎನ್ನುತ್ತಿದ್ದಾರೆ. ಮಾಜಿ ಸಚಿವರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಶಾಸಕರಾದ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕರು ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಈ ಕ್ಷಣದವರೆಗೂ ಶುಭಾಷಯ ಕೋರಿಲ್ಲ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಾದರೂ ವಿಜಯೇಂದ್ರಗೆ ಶುಭಾಷಯ ಹೇಳದೆ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷವನ್ನು ಎಕ್ಸ್‍ನಲ್ಲಿ ಟೀಕಾ ಪ್ರಹಾರ ನಡೆಸಿದ ಈ ನಾಯಕರು ಯಡಿಯೂರಪ್ಪ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಮುನಿಸಿಕೊಂಡಿದ್ದಾರೆ. ಭಾನುವಾರವೂ ಕೂಡ ಇದೇ ನಾಯಕರು ಬಿವೈವಿಗೆ ಶುಭಾಷಯ ಹೇಳದೆ ಮುಗ್ಗಾಮ್ಮಾಗಿ ಉಳಿದಿದ್ದಾರೆ.
ಅಮಾಸ್ ಮೇಲಿನ ದಾಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ; ನೆತನ್ಯಾಹು
ಮಾಜಿಕ ಜಾಲತಾಣದಲ್ಲಿ ಯಾವಾಗಲು ಸಕ್ರಿಯರಾಗಿರುತ್ತಿದ್ದ ಯತ್ನಾಳ್, ಸಿ.ಟಿ.ರವಿ ಶುಭ ಕೋರದೆ ಅಂತರ ಕಾಪಾಡಿಕೊಂಡಿರುವುದು ಬಿಜೆಪಿಯೊಳಗೆ ಮನೆಯೊಂದು ಮೂರು ಬಾಗಿಲು ಎಂಬುದನ್ನು ಸಾಬೀತುಪಡಿಸಿದೆ. ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ. ನರೇಂದ್ರ ಮೋದಿ ಕೂಡಾ ಓರ್ವ ಬಿಜೆಪಿಯಲ್ಲಿ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರುವುದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳಿದೆ.
ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗಲ್ಲ. ಅವರು ಒಬ್ಬ ನಾಯಕ ಮಾತ್ರ, ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.
ಇದಕ್ಕೆ ದನಿಗೂಡಿಸಿರುವ ಮಾಜಿ ಸಚಿವ ಸಿ.ಟಿ.ರವಿ, 35 ವರ್ಷಗಳ ರಾಜಕೀಯದಲ್ಲಿ ಈಗಾಗಲೇ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗು ಬಾಣವಾಗುತ್ತದೆ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಸ್ಪಷ್ಟತೆಯ ಜೊತೆಗೆ ವಿಜಯೇಂದ್ರ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆಯಿದೆ. ಯಶಸ್ವಿಯಾಗಲಿ ಎಂದು ವ್ಯಂಗ್ಯಭರಿತವಾಗಿ ಹೇಳಿದ್ದಾರೆ.
ಒಟ್ಟಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿರುವುದು ಬಿ.ಎಸ್. ಯಡಿಯೂರಪ್ಪ ಪಾಳಯದಲ್ಲಿ ಹರ್ಷ ಮೂಡಿಸಿದ್ದರೆ, ಅವರ ವಿರೋಗಳು ಮತ್ತು ಪ್ರಬಲ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದವರು ಮೆದುಧ್ವನಿಯಲ್ಲಿ ಅಸಮಾಧಾನ ಹೊರ ಹಾಕಲಾರಂಭಿಸಿದ್ದಾರೆ.