ಬೆಂಗಳೂರು,ನ.17- ವಿಧಾನಸಭೆ ಚುನಾವಣೆ ಮುಗಿದು ಆರು ತಿಂಗಳ ಬಳಿಕ ವಿಧಾನಮಂಡಲದ ಉಭಯ ಸದನಗಳಿಗೆ ಪ್ರತಿಪಕ್ಷದ ನಾಯಕನ ಆಯ್ಕೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು, ಅಂತಿಮವಾಗಿ ನಾಯಕ ಯಾರು ಎಂಬುದನ್ನು ಹೈಕಮಾಂಡ್ ಘೋಷಣೆ ಮಾಡಲಿದೆ.
ಖಾಸಗಿ ಹೋಟೆಲ್‍ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕೇಂದ್ರದಿಂದ ಚುನಾವಣಾವೀಕ್ಷಕರಾಗಿ ಆಗಮಿಸಿದ್ದ ಹಾಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‍ಕುಮಾರ್ ಗೌತಮ್ ಅವರುಗಳು ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.
ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿರುವುದರಿಂದ ಶಾಸಕರ ಅಭಿಪ್ರಾಯವನ್ನು ಪಡೆದಿರುವ ವೀಕ್ಷಕರು ಪಕ್ಷದ ವರಿಷ್ಠರಿಗೆ ವರದಿ ನೀಡಿದ ಬಳಿಕ ಒಂದೆರಡು ದಿನಗಳಲ್ಲಿ ಅಂತಿಮ ಹೆಸರು ಘೋಷಣೆಯಾಗಲಿದೆ.
ಪ್ರತಿಪಕ್ಷದ ನಾಯಕನ ರೇಸ್‍ನಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಮತ್ತು ಹಾಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಆರ್.ಅಶೋಕ್ ಹೆಸರು ಮುಂಚೂಣಿಯಲ್ಲಿದೆ.
ಇದರ ಜೊತೆಗೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಾರ್ಕಳದ ವಿ.ಸುನೀಲ್‍ಕುಮಾರ್, ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ, ವಿಜಾಪುರದ ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ಕೂಡ ಪ್ರಸ್ತಾಪವಾಗಿದೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ವೀರಶೈವ ಲಿಂಗಾಯಿತ ಸಮುದಾಯಕ್ಕೆ ನೀಡಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಪ್ರತಿಪಕ್ಷದ ನಾಯಕನ ಸ್ಥಾನ ಕೊಡಬೇಕೆಂಬ ಕೂಗು ಕೇಳಿಬಂದಿತ್ತು. ಮೂಲಗಳ ಪ್ರಕಾರ ಅಶೋಕ್‍ಗೆ ಕೆಲ ಹೆಚ್ಚಿನ ಶಾಸಕರು ಬೆಂಬಲವನ್ನು ಸೂಚಿಸಿದ್ದು, ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬೆಂಬಲವೂ ಸಿಕ್ಕಿದೆ ಎನ್ನಲಾಗುತ್ತಿದೆ.
ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ
ಈ ಮೊದಲು ಪ್ರತಿಪಕ್ಷದ ನಾಯಕನ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲವೇ ಯತ್ನಾಳ್ ಅವರಿಗೆ ನೀಡುವ ಬಗ್ಗೆ ಚಿಂತನೆ ಇತ್ತು. ಆದರೆ ವಿಜಯೇಂದ್ರ ಬಿಜೆಪಿ ಸಾರಥ್ಯ ವಹಿಸಿದ ಮೇಲೆ ಈ ಇಬ್ಬರ ಹೆಸರುಗಳು ಪಟ್ಟಿಯಿಂದ ಹೊರಗುಳಿದವು.ಆರ್.ಅಶೋಕ್ ಪ್ರತಿಪಕ್ಷದ ನಾಯಕನಾದರೆ ಹಿಂದುಳಿದ ಸಮುದಾಯದ ವಿ.ಸುನೀಲ್‍ಕುಮಾರ್ ಉಪನಾಯಕನಾಗುವ ಸಂಭವವಿದೆ.
ಒಂದು ಹೈಕಮಾಂಡ್ ಕಳಿಸಿರುವ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸುವುದು ಅಥವಾ ಎರಡನೆಯದ್ದಾಗಿ ಶಾಸಕರ ಅಭಿಪ್ರಾಯ ಆಲಿಸಿ ಹೈಕಮಾಂಡ್ ನಾಯಕರ ಜೊತೆ ಸಂಪರ್ಕ ಮಾಡಿ ಹೆಸರನ್ನು ಅಂತಿಮಗೊಳಿಸಿ ಶಾಸಕಾಂಗ ಪಕ್ಷದ ಸಭೆಯಲ್ಲೇ ಹೆಸರು ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದು ಸಾಧ್ಯವಾಗದಿದ್ದರೆ ವರಿಷ್ಠರೇ ಹೆಸರನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.
ಡಾ.ಅಶ್ವತ್ಥನಾರಾಯಣ್ ನೇರ ಪ್ರತಿಪಕ್ಷ ಸ್ಥಾನ ಕೇಳದಿದ್ದರೂ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಯಾವ ಸ್ಥಾನ ಸಿಕ್ಕರೂ ನಿಭಾಯಿಸಲು ಸಿದ್ದವಾಗಿ ಕುಳಿತಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರ ಆಯ್ಕೆ ಮುಗಿದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷ ನಾಯಕ ಸ್ಥಾನವನ್ನು ನೇರವಾಗಿ ಕೇಳದಿದ್ದರೂ ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇನೆ. ಪ್ರತಿಪಕ್ಷ ನಾಯಕನ ಸ್ಥಾನ ನೀಡಿದರೂ ನಿರ್ವಹಿಸುವ ಅರ್ಹತೆ ನನಗಿದೆ ಎಂದು ತಮ್ಮ ಅಪೇಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಅಧಿವೇಶನದಲ್ಲಿಯೇ ಪ್ರತಿಪಕ್ಷ ನಾಯಕನ ರೀತಿಯಲ್ಲಿ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದರು, ಸದನದಲ್ಲಿ ಸಾಮಥ್ರ್ಯ ಪ್ರದರ್ಶಿಸಿ ಪ್ರತಿಪಕ್ಷ ನಾಯಕನ ಸ್ಥಾನದ ರೇಸ್‍ಗೆ ಬಂದಿದ್ದಾರೆ. ಹೈಕಮಾಂಡ್ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.
ಇವರ ಜೊತೆ ಮಾಜಿ ಸಚಿವ ಸುನೀಲ್‍ಕುಮಾರ್ ಕೂಡ ರೇಸ್‍ನಲ್ಲಿದ್ದಾರೆ. ಹಿಂದುಳಿದ ವರ್ಗದ ನಾಯಕ, ಉತ್ತಮ ವಾಗ್ಮಿಯೂ ಆಗಿರುವ ಸುನೀಲ್‍ಕುಮಾರ್ ಯಾವ ಬಣದಲ್ಲಿಯೂ ಗುರುತಿಸಿಕೊಳ್ಳದೇ ಪಕ್ಷದ ಪರವಾಗಿ ದನಿ ಎತ್ತುತ್ತಾ ಬಂದಿದ್ದು, ಈ ಬಾರಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಆರ್.ಅಶೋಕ್‍ಗೆ ಅವಕಾಶ ನೀಡಿದರೆ ರಾಜ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ನಡುವೆ ಸಮನ್ವಯತೆ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಅಶೋಕ್‍ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಹಾಗಂತ ಅಶ್ವತ್ಥನಾರಾಯಣ್ ಅವರನ್ನು ಕಡೆಗಣಿಸಲೂ ಸಾಧ್ಯವಿಲ್ಲ. ಡಿಸಿಎಂ ಡಿಕೆ.ಶಿವಕುಮಾರ್‍ಗೆ ಠಕ್ಕರ್ ಕೊಡುತ್ತಲೇ ಬಂದಿರುವ ಅಶ್ವತ್ಥನಾರಾಯಣ್‍ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎನ್ನುವುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಪರಿಷತ್‍ಗೆ ಕೋಟಾ?:
ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಸ್ಥಾನಕ್ಕೂ ಹೆಸರನ್ನು ಪ್ರಕಟಿಸಲಾಗುತ್ತದೆ. ಒಮ್ಮೆ ಪ್ರತಿಪಕ್ಷ ನಾಯಕರಾಗಿ ಸಭಾ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಕೆಲಸ ಮಾಡಿರುವ ಹಿನ್ನೆಲೆ ಈ ಬಾರಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಅಷ್ಟಾಗಿ ರಾಜಕೀಯ ಲೆಕ್ಕಾಚಾರ ಹಾಕುವುದಿಲ್ಲ, ಪಕ್ಷದ ಮೂಲಗಳ ಪ್ರಕಾರ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅಥವಾ ಮಹಿಳೆಗೆ ಅವಕಾಶ ನೀಡಲು ನಿರ್ಧರಿಸಿದರೆ ತೇಜಸ್ವಿನಿಗೌಡ ಅವರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುವಂತೆ ಪಕ್ಷದ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಆಹ್ವಾನ ಕಳಿಸಿದ್ದು, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.