Monday, October 7, 2024
Homeರಾಜ್ಯವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

ಬೆಂಗಳೂರು, ನ.16- ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ನಾಳೆ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತು ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದಾರೆ. ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾಳೆ (ನ.17) ಸಂಜೆ 6 ಗಂಟೆಗೆ ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‍ನಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಿದ್ದು, ಪಕ್ಷದ ಎಲ್ಲ ಶಾಸಕರು ಮತ್ತು ಪರಿಷತ್ ಸದಸ್ಯರು ತಪ್ಪದೇ ಭಾಗವಹಿಸಬೇಕೆಂದು ಸೂಚಿಸಲಾಗಿದೆ.

ಡಿಸೆಂಬರ್ 4ರಂದು ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲೇ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚೊಚ್ಚಲ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಶಾಸಕರ ಸಭೆಗೆ ದೆಹಲಿಯಿಂದ ಹೈಕಮಾಂಡ್ ಪ್ರತಿನಿಗಳಾಗಿ ಇಬ್ಬರು ನಾಯಕರು ವೀಕ್ಷಕರಾಗಿ ಆಗಮಿಸಲಿದ್ದಾರೆ. ಯಾವ ನಾಯಕರನ್ನು ಕಳುಹಿಸಲಿದ್ದಾರೆ ಎನ್ನುವ ಮಾಹಿತಿ ಇನ್ನು ರಾಜ್ಯ ಘಟಕಕ್ಕೆ ಬಂದಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ನಾಯಕರನ್ನೇ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.

ದೇಶ ತೊರೆಯಲು ಭಾರತೀಯ ಪಡೆಗಳಿಗೆ ಮಾಲ್ಡೀವ್ಸ್ ಸೂಚನೆ

ಹೈಕಮಾಂಡ್ ಸಂದೇಶ ಹೊತ್ತು ಬರುವ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸೂಚನೆ ತಿಳಿಸಿ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮುಗಿಸಲಿದ್ದಾರೆ. ಸದನದಲ್ಲಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಪರಿಷತ್‍ನಲ್ಲೂ ಆಡಳಿತ ಪಕ್ಷವನ್ನು ಎದುರಿಸಬಲ್ಲ ವ್ಯಕ್ತಿಗೆ ಅವಕಾಶ ನೀಡಲಾಗುತ್ತದೆ.

ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಶಾಸಕರನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಲಿದ್ದಾರೆ. ಶಾಸಕರ ಸಹಕಾರ ಕೋರಲಿದ್ದಾರೆ. ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸುವ ಪೂರ್ವದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹೆಜ್ಜೆ ಇರಿಸಲು ಶಾಸಕರ ಜೊತೆ ಮಾತುಕತೆ ನಡೆಸಿ, ಅವರ ಅಭಿಪ್ರಾಯ ಆಲಿಸಲಿದ್ದಾರೆ.

ನಂತರ ರಾಜ್ಯ ಪ್ರವಾಸ, ಕಾರ್ಯಕಾರಿ ಸಮಿತಿಯಲ್ಲಿ ಮಾರ್ಪಾಡು ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಶುಕ್ರವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು, ಪುದುಚೇರಿಯಲ್ಲಿ ರಣಮಳೆ

ರೇಸ್‍ನಲ್ಲಿ ಯಾರೆಲ್ಲಾ ಇದ್ದಾರೆ?
ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಭರ್ಜರಿ ಪೈಪೋಟಿಯೇ ಇದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ್, ಆರ್ ಅಶೋಕ್ ಮುಂಚೂಣಿಯಲ್ಲಿದ್ದಾರೆ. ಇತ್ತ ಶಾಸಕ ಸುನೀಲ್ ಕುಮಾರ್ ಹಿಂದುಳಿದ ವರ್ಗ ಪರವಾಗಿ ಪರಿಗಣಿಸಬೇಕು ಎನ್ನುತ್ತಾರೆ. ಉಳಿದಂತೆ ಇತರೆ ನಾಯಕರಲ್ಲಿಯೂ ಕೂಡ ಆಕಾಂಕ್ಷಿಗಳಿದ್ದು ಹೈಕಮಾಂಡ್ ತೀರ್ಮಾನ ಏನು ಎಂಬುದನ್ನು ಕಾದುನೋಡಬೇಕಿದೆ.

ಆದರೆ, ನಾಳೆ ಹೆಸರನ್ನು ಘೋಷಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ವೀಕ್ಷಕರು ಇಲ್ಲಿ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಇದೇ ವೇಳೆ ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ತೆರಳುವುದರಿಂದ ಅವರು ವಾಪಸಾದ ಬಳಿಕ ಅಂತಿಮಗೊಳ್ಳುವ ಸಂಭವವೂ ಇದೆ ಎನ್ನಲಾಗಿದೆ.

RELATED ARTICLES

Latest News