ಒಟ್ಟಾವಾ,ಜ.10-ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಆಡಳಿತಾರೂಢ ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಹುದ್ದೆಗೆ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಪ್ರಸ್ತುತ ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಪ್ರಧಾನಿ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಿದ್ದಾರೆ. ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಅವರು ಈ ಘೋಷಣೆ ಮಾಡಿದರು. ಕೆನಡಾದ ಮುಂದಿನ ಪ್ರಧಾನಿಯಾಗುವ ಮೂಲಕ ದೇಶದ ಪುನರ್ನಿರ್ಮಾಣ ಮತ್ತು ಸಮೃದ್ಧಿಯ ಕಡೆಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್‌್ಸನಲ್ಲಿ ಚಂದ್ರ ಆರ್ಯ ಅವರು ಪೋಸ್ಟ್ ಮಾಡಿದ್ದಾರೆ.
ಜಸ್ಟಿನ್ ಟ್ರುಡೊ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶದ ಪ್ರಧಾನಿ ಹುದ್ದೆಯಲ್ಲಿ ಉಳಿಯುತ್ತಾರೆ. ಹೊಸ ಪ್ರಧಾನಿ ಆಯ್ಕೆಯಾದ ನಂತರ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ನಾಯಕರು ಈಗ ಪ್ರಧಾನಿ ಹುದ್ದೆಯ ರೇಸ್ ನಲ್ಲಿದ್ದಾರೆ. ಇದೀಗ ಪ್ರಧಾನಿ ಹುದ್ದೆಯ ರೇಸ್‌ಗೆ ಹೊಸ ಹೆಸರು ಸೇರ್ಪಡೆಯಾಗಿದೆ.
ನಾನು ಕೆನಡಾದ ಮುಂದಿನ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ, ಇದರಿಂದ ನಾನು ನಮ್ಮ ದೇಶವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು. ಕೆನಡಾಕ್ಕೆ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವದ ಅಗತ್ಯವಿದೆ ಎಂದು ಅವರು ಹೇಳಿದರು.
ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಕೆನಡಾ ಇಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಆರ್ಯ ಹೇಳಿದ್ದಾರೆ. ಕರ್ನಾಟಕದವರಾದ ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ದ್ವಾರಲು ಗ್ರಾಮದಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿ, 2006ರಲ್ಲಿ ಕೆನಡಾಕ್ಕೆ ತೆರಳಿದ ನಂತರ, ಅವರು ಮೊದಲು ಇಂಡೋ-ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2015ರ ಕೆನಡಾದ ಫೆಡರಲ್ ಚುನಾವಣೆಯಲ್ಲಿ ನೇಪಿಯನ್ ರೈಡಿಂಗ್‌ಗೆ ಸಂಸದರಾದರು. ಅಲ್ಲದೆ 2019 ಮತ್ತು 2021ರಲ್ಲಿ ಮರು ಆಯ್ಕೆಯಾದರು.
ಚಂದ್ರ ಆರ್ಯ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ವಿಶೇಷವಾಗಿ ಭಾರತೀಯ ಸಮುದಾಯ ಮತ್ತು ಕೆನಡಾದ ಸಮಾಜದ ಪ್ರಮುಖ ವಿಷಯಗಳ ಬಗ್ಗೆ ಮುಂಚೂಣಿಯಲ್ಲಿದ್ದಾರೆ. 2022ರಲ್ಲಿ ಕೆನಡಾದ ಹೌಸ್ ಆಫ್ ಕಾಮರ್‌ರಸನಲ್ಲಿ ತಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿದರು ಮತ್ತು ಟೊರೊಂಟೊದಲ್ಲಿನ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣಗಳಲ್ಲಿ ಧ್ವನಿ ಎತ್ತಿದರು. ಈ ದಾಳಿಯ ಹೊಣೆಗಾರರು ಖಲಿಸ್ತಾನಿ ಉಗ್ರರು ಎಂದು ಹೇಳಿದ್ದರು. ಲಿಬರಲ್ ಪಕ್ಷದ ನಾಯಕನಾದರೆ ಕೆನಡಾದ ಭವಿಷ್ಯಕ್ಕೆ ಅಗತ್ಯವಾದ ಕಠಿಣ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಆರ್ಯ ಹೇಳಿದ್ದಾರೆ. ಅವರು ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದರು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಕೆನಡಾದಲ್ಲಿ ಅನೇಕ ಜನರು, ವಿಶೇಷವಾಗಿ ಯುವ ಪೀಳಿಗೆ, ಗಂಭೀರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಧ್ಯಮ ವರ್ಗದ ಜನರು ಕಷ್ಟಪಡುತ್ತಿದ್ದಾರೆ ಮತ್ತು ಅನೇಕ ಕಾರ್ಮಿಕ ಕುಟುಂಬಗಳು ಬಡತನಕ್ಕೆ ಬೀಳುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು, ಮುಂದಿನ ಕೆಲವು ದಶಕಗಳವರೆಗೆ ದೇಶದ ಸಮೃದ್ಧಿಯನ್ನು ಖಾತ್ರಿಪಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರ್ಯ ಹೇಳಿದ್ದಾರೆ.