ಬೆಂಗಳೂರು,ಜು.21- ಸಾರಿಗೆ ಬಸ್‍ಗಳಲ್ಲಿ ಇನ್ನು ಮುಂದೆ ಚಾಲಕರು ಅಥವಾ ನಿರ್ವಾಹಕರು ಅನಪೇಕ್ಷಣಿಯವಾಗಿ ಮೊಬೈಲ್ ಬಳಕೆ ಹಾಗೂ ರೀಲ್ಸ್ ಗಳನ್ನು ಮಾಡಿದರೆ ಸೇವೆಯಿಂದ ಅಮಾನತ್ತುಗೊಳಿಸುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಸಾರಿಗೆ ಸಮುಚ್ಚಯಗಳಲ್ಲಿನ ಸಿಬ್ಬಂದಿಗಳು ಇತ್ತೀಚೆಗೆ ರೀಲ್ಸ್ ಮಾಡಿ ಖ್ಯಾತಿಗಳಿಸುವ ಉಮೇದಿಗೆ ಬಿದ್ದಿದ್ದಾರೆ.
ಕೆಎಸ್‍ಆರ್‍ಟಿಸಿ ಚಾಲಕರೊಬ್ಬರು ಮಳೆ ಸುರಿಯುವಾಗ ಛತ್ರಿ ಹಿಡಿದುಕೊಂಡು ಬಸ್ ಚಾಲನೆ ಮಾಡಿ ರೀಲ್ಸ್ ಚಿತ್ರೀಕರಿಸಿದ್ದರು. ಈ ವಿಡಿಯೋವನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯನವರ ಸರ್ಕಾರ ಅ„ಕಾರಕ್ಕೆ ಬಂದ ಬಳಿಕ ಪಂಚಖಾತ್ರಿ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಸಾರಿಗೆ ಸೇರಿದಂತೆ ಇತರ ನಾಗರಿಕ ಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿದೆ. ಬಸ್‍ಗಳು ಸೋರುತ್ತಿವೆ ಎಂದು ಕೆಂಡ ಕಾರಿದ್ದರು.
ಈ ಕುರಿತು ಎಚ್ಚರಿಕೆ ಕೊಟ್ಟ ನಂತರವೂ ಚಾಲನೆಯ ಸಂದರ್ಭದಲ್ಲೇ ಬಹಳಷ್ಟು ಚಾಲಕರು ರೀಲ್ಸ್‍ಗಳನ್ನು ಮಾಡಿದ್ದರು. ಹೀರೋ ಗಿರಿ ತೋರಿಸುವ ಚಾಲಕರು, ನಿರ್ವಾಹಕರ ಈ ಹುಚ್ಚಾಟಗಳಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಸಂಬಂಧ ಹಲವಾರು ದೂರುಗಳು, ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಇನ್ನು ಮುಂದೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಕರ್ತವ್ಯದ ವೇಳೆ ಅನಪೇಕ್ಷಣೀಯವಾಗಿ ಮೊಬೈಲ್ ಬಳಕೆ ಹಾಗೂ ರೀಲ್ಸ್ ಮಾಡುವುದು ಕಂಡುಬಂದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.