Wednesday, April 2, 2025
Homeರಾಜ್ಯರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ರಿಟ್‌ ಅರ್ಜಿ

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ರಿಟ್‌ ಅರ್ಜಿ

ಬೆಂಗಳೂರು,ಆ.19– ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತಡೆಯಾಜ್ಞೆ ಕೋರಿದ್ದಾರೆ.

ಮುಖ್ಯಮಂತ್ರಿಯವರ ಪರವಾಗಿ ಮಾಜಿ ಅಡ್ವಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ವಾದ ಮಂಡಿಸಿದ್ದು, ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.ವಾದವನ್ನು ಪರಿಗಣಿಸಿದ ಹೇಮಂತ್‌ ಚಂದನ್‌ ಗೌಡರ್‌ ಅವರನ್ನೊಳಗೊಂಡ ಪೀಠ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ರಾಜ್ಯಪಾಲರು ನೀಡಿರುವ ಅಭಿಯೋಜನೆಯ ಪೂರ್ವಾನುಮತಿಗೆ ತಡೆಯಾಜ್ಞೆ ನೀಡಲು ಹಾಗೂ ರದ್ದುಪಡಿಸಲು ಮನವಿ ಮಾಡಲಾಗಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅಭಿಯೋಜನೆಯ ಪೂರ್ವಾನುಮತಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಜೆಡಿಎಸ್‌‍ನ ಕಾನೂನು ಘಟಕದ ಪ್ರದೀಪ್‌ ಕುಮಾರ್‌ ಹಾಗೂ ಮೈಸೂರಿನ ಸ್ನೇಹಮಯಿ ಕೃಷ್ಣ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌-17, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆ ವಿವಿಧ ಕಲಂಗಳಡಿ ದೂರು ದಾಖಲಿಸಿ ವಿಚಾರಣೆ ನಡೆಸಲು ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ.

ಆದರೆ ಪೂರ್ವಾನುಮತಿ ನೀಡುವ ಮುನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಲ್ಲಿಸಿರುವ ದಾಖಲಾತಿಗಳನ್ನು ರಾಜ್ಯಪಾಲರು ಪರಿಶೀಲನೆ ನಡೆಸಿಲ್ಲ. ಯಾವುದೇ ಪ್ರಾಥಮಿಕ ತನಿಖೆ ನಡೆದಿಲ್ಲ. ಆದರೂ ಪೂರ್ವಾನುಮತಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ರಿಟ್‌ ಅರ್ಜಿಯಲ್ಲಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಪ್ರಾಥಮಿಕ ತನಿಖೆ ನಡೆದು ಅದು ಮೇಲ್ನೋಟಕ್ಕೆ ವಾಸ್ತವಾಂಶ ಕಂಡುಬಂದರೆ ಹೆಚ್ಚಿನ ವಿಚಾರಣೆಗೆ ಸಕ್ಷಮ ಅಧಿಕಾರಿಗಳು ಅಭಿಯೋಜನೆಗೆ ಅನುಮತಿ ಕೋರಬಹುದು. ಮುಖ್ಯಮಂತ್ರಿ ಹುದ್ದೆಯಲ್ಲಿರುವವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಬೇಕಾದರೆ ಪೊಲೀಸ್‌‍ ಮಹಾನಿರ್ದೇಶಕ ದರ್ಜೆಯ ಅಧಿಕಾರಿ ಅರ್ಜಿ ನೀಡಬೇಕು. ಆದರೆ ಇಲ್ಲಿ ಯಾವುದೇ ಅಂತಹ ನಿಯಮಗಳು ಪಾಲನೆಯಾಗಿಲ್ಲ ಎಂದು ವಾದಿಸಲಾಗಿದೆ.

ಜೊತೆಗೆ ಸಂವಿಧಾನದ 163 ಪರಿಚ್ಛೇದದನ್ವಯ ರಾಜ್ಯಪಾಲರು ಸಚಿವ ಸಂಪುಟ ಸಭೆಯ ಶಿಫಾರಸನ್ನು ತಿರಸ್ಕರಿಸುವಂತಿಲ್ಲ. ಈ ಹಿಂದೆ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡು ಅಭಿಯೋಜನೆ ಪೂರ್ವಾನುಮತಿಗೆ ಸಲ್ಲಿಸಿರುವ ದೂರರ್ಜಿಗಳನ್ನು ತಿರಸ್ಕರಿಸಬೇಕು ಮತ್ತು ಅಭಿಯೋಜನೆಗೆ ಅನುಮತಿ ನೀಡಬಾರದು ಎಂದು ರಾಜ್ಯಪಾಲರಿಗೆ ಸಲಹೆ ನೀಡಿತ್ತು. ಅದನ್ನು ತಿರಸ್ಕರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಮುಡಾ ಪ್ರಕರಣದ ಅಭಿಯೋಜನೆ ಕೋರ್ಟ್‌ ಮೆಟ್ಟಿಲೇರಿವುದರಿಂದ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯದಲ್ಲಿ ತೀವ್ರ ಕುತೂಹಲ ಕೆರಳಿದೆ.

RELATED ARTICLES

Latest News