Thursday, September 19, 2024
Homeರಾಜಕೀಯ | Politicsಕಾಂಗ್ರೆಸ್‌‍ನೊಳಗೇ ನಡೆಯುತ್ತಿದೆಯಾ ಸಿದ್ದರಾಮಯ್ಯನವರ ಸಿಎಂ ಕುರ್ಚಿಯ ಕಾಲೆಳೆಯುವ ಸಂಚು..?

ಕಾಂಗ್ರೆಸ್‌‍ನೊಳಗೇ ನಡೆಯುತ್ತಿದೆಯಾ ಸಿದ್ದರಾಮಯ್ಯನವರ ಸಿಎಂ ಕುರ್ಚಿಯ ಕಾಲೆಳೆಯುವ ಸಂಚು..?

ಬೆಂಗಳೂರು,ಆ.19- ಮುಡಾ ಪ್ರಕರಣದ ಚಕ್ರವ್ಯೂಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಲುಕುತ್ತಿದ್ದಂತೆ ಕಾಂಗ್ರೆಸ್‌‍ನಲ್ಲಿ ವಿರೋಧಿ ಪಡೆ ಸದ್ದಿಲ್ಲದೆ ಸಕ್ರಿಯವಾಗಿದ್ದು, ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಯ ಸಂಚುಗಳು ಆರಂಭಗೊಂಡಿವೆ.

ಮೇಲ್ನೋಟಕ್ಕೆ ಸಂಪುಟದ ಎಲ್ಲಾ ಸಚಿವರು, ಶಾಸಕರು, ಹೈಕಮಾಂಡ್‌ ನಾಯಕರು, ಸಿದ್ದರಾಮಯ್ಯ ಅವರಿಗೆ ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.ಅಖಂಡವಾದ ಈ ಬೆಂಬಲದ ನಡುವೆಯೂ ರಹಸ್ಯ ಸಭೆಗಳು ರಾಜಕೀಯ ಚಟುವಟಿಕೆಗಳು ಗರಿಗೆದರಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಖಾಡ ಪ್ರವೇಶಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ನಿನ್ನೆ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕೆಲ ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಂದಷ್ಟು ಶಾಸಕರು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರ ವಿರುದ್ಧವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ದಿನವೇ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಆಗಮಿಸಿದ್ದರು. ಇದು ಪೂರ್ವನಿರ್ಧರಿತ ಕಾರ್ಯಕ್ರಮ ಎಂದು ಹೇಳಲಾಗಿದ್ದರೂ ರಾಜಕೀಯವಾಗಿ ನಾನಾ ಚರ್ಚೆಗಳನ್ನು ಹುಟ್ಟುಹಾಕಿದೆ.

ಕಾಂಗ್ರೆಸ್‌‍ನ ಕೆಲ ಶಾಸಕರು ಶ್ಯಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮನವೊಲಿಸಿ ರಾಜ್ಯರಾಜಕಾರಣಕ್ಕೆ ಮರಳುವಂತೆ ಹಾಗೂ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಇದಕ್ಕೆ ನಕಾರಾತಕ ಪ್ರತಿಕ್ರಿಯೆ ನೀಡಿರುವ ಖರ್ಗೆಯವರು ಸದ್ಯಕ್ಕೆ ಅಂತಹ ಚರ್ಚೆಗಳಿಲ್ಲ. ತಮಗೆ ರಾಜ್ಯ ರಾಜಕೀಯದ ಬಗ್ಗೆ ಆಸಕ್ತಿಯೇ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಒಂದು ವೇಳೆ ಎಫ್‌ಐಆರ್‌ ದಾಖಲಾದ ಬಳಿಕ ರಾಜೀನಾಮೆ ನೀಡಲೇಬೇಕು ಎಂಬ ಪರಿಸ್ಥಿತಿ ಬಂದರೆ ಪರ್ಯಾಯ ನಾಯಕತ್ವಕ್ಕೆ ಮಲ್ಲಿಕಾರ್ಜುನ ಖರ್ಗೆಯವರೇ ಬರಬೇಕು. ಉಳಿದಂತೆ ಯಾರಿಗೂ ಅವಕಾಶ ನೀಡಬಾರದು ಎಂದು ಒಳಗೊಳಗೇ ಒತ್ತಡ ಹೆಚ್ಚುತ್ತಿದೆ.

ಈ ನಡುವೆ ಇದೇ 23 ರಂದು ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಬುಲಾವ್‌ ನೀಡಿರುವುದು ಮತ್ತಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ.ಅಂದು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯನವರು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಈ ಮೊದಲು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಎರಡು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ವಿವರಣೆ ನೀಡಿದ್ದರು.ಅದರ ಹೊರತಾಗಿಯೂ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್‌‍ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವಂತಿದೆ.

ಹೀಗಾಗಿ ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್‌‍ ತನ್ನ ಸೈದ್ಧಾಂತಿಕ ನಿಲುವುಗಳಿಗೆ ಕಟಿಬದ್ಧರಾಗಲು ಎಫ್‌ಐಆರ್‌ ದಾಖಲಾದ ಬಳಿಕ ರಾಜೀನಾಮೆ ಅನಿವಾರ್ಯವಾಗಬಹುದು ಎಂಬ ಸಂದೇಶ ರವಾನೆಯಾಗಿದೆ.

ಈ ನಿಟ್ಟಿನಲ್ಲಿ ಚರ್ಚೆ ಮಾಡುವ ಸಲುವಾಗಿಯೇ ಸಿದ್ದರಾಮಯ್ಯನವರನ್ನು ದೆಹಲಿಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.ಇತ್ತ ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿ ರಾಜ್ಯಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ.

ರಾಜಕೀಯವಾಗಿ ಪ್ರತಿಸಮರ ಏನೇ ಇದ್ದರೂ ಎಫ್‌ಐಆರ್‌ದಾಖಲಾದ ಬಳಿಕ ಅಧಿಕಾರದಲ್ಲಿ ಮುಂದುವರೆಯುವುದು ಕಷ್ಟವಾಗಬಹುದು. ಅದಕ್ಕಾಗಿಯೇ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಸಂಗ್ರಹಿಸುವಂತೆ ಹೈಕಮಾಂಡ್‌ ಸೂಚಿಸಿದೆ ಎನ್ನಲಾಗಿದೆ.

ಈ ಮೊದಲಿನಂತೆ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗೆ ಮುಂದುವರೆಯಲಿದೆಯೇ ಅಥವಾ ಪರಿಸ್ಥಿತಿ ಏರುಪೇರಾಗಲಿದೆಯೇ ಎಂಬ ಕುರಿತು ಹೈಕಮಾಂಡ್‌ ನಿಗಾ ವಹಿಸುತ್ತಿದೆ ಎನ್ನಲಾಗಿದೆ.

ಅಭಿಯೋಜನೆಗೆ ಅನುಮತಿ ನೀಡುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಕಾನೂನು ಸಮರವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯುವ ಪ್ರಯತ್ನ ನಡೆಸುತ್ತಿದ್ದಾರೆ.ಇದರ ನಡುವೆ ತೆರೆಮರೆಯಲ್ಲಿ ಆಂತರಿಕ ವಿರೋಧಿಗಳು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರಿಗೆ ಖೆಡ್ಡ ತೋಡಲು ತಯಾರಿ ನಡೆಸುತ್ತಿದ್ದಾರೆ.

RELATED ARTICLES

Latest News