ಬೆಂಗಳೂರು,ಫೆ.6- ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ನಾಳೆ ದೆಹಲಿಯಲ್ಲಿ ನಡೆಯ ಲಿರುವ ಪಕ್ಷಾತೀತ ಪ್ರತಿಭಟನೆಗೆ ಸಾಕಷ್ಟು ಪೂರ್ವ ತಯಾರಿಗಳು ನಡೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಗೆ ಭೇಟಿ ನೀಡಿ ನಿನ್ನೆ ರಾತ್ರಿಯೇ ಎಲ್ಲಾ ಪೂರ್ವ ತಯಾರಿಗಳನ್ನು ಖುದ್ದು ಪರಿಶೀಲಿಸಿದ್ದಾರೆ. ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರು ದೆಹಲಿಯಲ್ಲಿ ಬೀಡು ಬಿಟ್ಟು ಸಿದ್ಧತೆಗಳನ್ನು ಗಮನಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆಗೆ ಗೈರು ಹಾಜರಾಗಬಾರದೆಂದು ಕಟ್ಟಪ್ಪಣೆ ಮಾಡಲಾಗಿದ್ದು, ಕೆಲವರಿಗೆ ಡಿ.ಕೆ.ಶಿವಕುಮಾರ್‍ರವರೇ ನೇರವಾಗಿ ಕರೆ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡುತ್ತಿದ್ದಾರೆ. ತುರ್ತು ಸಂದರ್ಭವಿಲ್ಲದೇ ಅನಗತ್ಯವಾಗಿ ಯಾರೂ ಗೈರು ಹಾಜರಾಗಬಾರದು. ದೆಹಲಿಯಲ್ಲಿ ನಡೆಯುತ್ತಿರುವ ಬಲಪ್ರದರ್ಶನದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಸಲಹೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್‍ನ ಪ್ರತಿಭಟನೆಯಿಂದ ವಿಚಲಿತವಾಗಿರುವ ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಆಸ್ಪದ ಕೊಡದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುವಾಗಬೇಕೆಂದು ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ದೆಹಲಿಯ ಜಂತರ್ ಮಂತರ್‍ನಲ್ಲಿ ವೇದಿಕೆ ಸೇರಿದಂತೆ ಎಲ್ಲಾ ಶಿಷ್ಟಾಚಾರಗಳ ಮೇಲೂ ನಿಗಾ ವಹಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯ ಸಂಸದರಿಗೆ, ಕೇಂದ್ರ ಸಚಿವರಿಗೆ ಪತ್ರ ಬರೆದು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿರುವುದು ಗಮನ ಸೆಳೆದಿದೆ. ಅನಿರೀಕ್ಷಿತವಾದ ಮುಖ್ಯಮಂತ್ರಿಯವರ ಆಹ್ವಾನ ಬಿಜೆಪಿ ಸಂಸದರಿಗೆ ಬಿಸಿ ತುಪ್ಪವಾಗಿದೆ.
ಇಂದಿನಿಂದ ಕೇಂದ್ರದ ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಗೆ
ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂಬ ಸಮರ್ಥನೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳೂ ಕೂಡ ನಡೆದಿವೆ. ಖುದ್ದು ಪ್ರಧಾನಿ ನರೇಂದ್ರಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರವರೇ ಸಂಸತ್‍ನಲ್ಲಿ ಹೇಳಿಕೆ ನೀಡಿ, ಅನ್ಯಾಯವಾಗಿಲ್ಲ ಎಂಬ ವಾದ ಮಂಡಿಸಿದ್ದಾರೆ. ಆದರೆ 2023-24 ನೇ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಏಕೆ ಬಿಡುಗಡೆ ಮಾಡಿಲ್ಲ, ನೀರಾವರಿ, ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಹಣಕಾಸು ಆಯೋಗದ ವಿಶೇಷ ಅನುದಾನವನ್ನು ರದ್ದುಗೊಳಿಸಿದ್ದೇಕೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಅಂಕಿಅಂಶಗಳ ಸಮೇತ ಮುಂದಿಟ್ಟಿದೆ.
ಇದಕ್ಕೆ ರಾಜಕೀಯವಾಗಿ ಉತ್ತರಿಸುತ್ತಿರುವ ಬಿಜೆಪಿಯವರು ಅಂಕಿ ಅಂಶಗಳ ಸಹಿತವಾದ ಟೀಕೆಗಳಿಗೆ ಪ್ರತಿಕ್ರಿಯಿಸಲಾಗದೆ ಪರದಾಡುತ್ತಿದ್ದಾರೆ. ನಾಳೆ ದೆಹಲಿಯಲ್ಲಿ ಪ್ರತಿಭಟನೆ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ.