Sunday, April 28, 2024
Homeರಾಷ್ಟ್ರೀಯಇಂದಿನಿಂದ ಕೇಂದ್ರದ ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಗೆ

ಇಂದಿನಿಂದ ಕೇಂದ್ರದ ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಗೆ

ನವದೆಹಲಿ,ಫೆ.6- ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರಾಂಡ್ ಅಕ್ಕಿ ಮಾರಾಟ ಇಂದಿನಿಂದ ದೇಶದದ್ಯಾಂತ ಆರಂಭವಾಗಿದೆ. ಭಾರತ್ ಬ್ರಾಂಡ್ ಅಕ್ಕಿ ಗ್ರಾಹಕರಿಗೆ ಆನ್‍ಲೈನ್‍ನಲ್ಲೂ ಸಹ ಸಿಗಲಿದ್ದು, ಪ್ರತಿ ಕೆ.ಜಿ ಅಕ್ಕಿಗೆ 29 ದರ ನಿಗದಿಪಡಿಸಲಾಗಿದೆ. 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್ ಗಳಲ್ಲಿ ದೊರೆಯಲಿದೆ.

ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‍ನಷ್ಟು ಅಕ್ಕಿಯನ್ನು ಬಿಡುಗಡೆ ಮಾಡಲಾಗುತ್ತದೆ. ಸರಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಇ – ಕಾಮರ್ಸ್ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ಭಾರತ್ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‍ಗಳಲ್ಲಿ ಮಾರಾಟಗೊಳ್ಳಲಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ.

ಆನ್‍ಲೈನ್ ವೇದಿಕೆಗಳಲ್ಲದೆ ಎನ್‍ಎಎಫ್‍ಇಡಿ (ನಾಫೆಡ್), ಎನ್ಸಿಸಿಎಫ್, ಕೇಂದ್ರೀಯ ಭಂಡಾರಗಳಲ್ಲಿ ಅಕ್ಕಿ ಮಾರಾಟಕ್ಕೆ ಲಭ್ಯವಿದೆ. ಇದೇ ವೇಳೆ ಅಕ್ಕಿ ದರ ನಿಯಂತ್ರಣಕ್ಕೆ ಬರುವವರೆಗೂ ಅಕ್ಕಿ ರಫ್ತಿಗೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 14.5 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇ 15.5ರಷ್ಟು ಅಕ್ಕಿ ದರ ಏರಿಕೆಯಾಗಿದೆ. ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ದಾಸ್ತಾನು ಮಾಡಿರುವ ಅಕ್ಕಿ ಮತ್ತು ಭತ್ತದ ಪ್ರಮಾಣವನ್ನು ವರ್ತಕರು, ಗಿರಣಿ ಮಾಲೀಕರು ಬಹಿರಂಗಪಡಿಸಬೇಕು ಎಂದು ಸೂಚಿಸಿದೆ.

ಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್

ಅಕ್ಕಿ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ದೇಶದಲ್ಲಿ ಹಲವು ಆಹಾರ ಪದಾರ್ಥಗಳ ದರಗಳು ಏರಿಕೆ ಕಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವುಗಳ ರಫ್ತನ್ನು ನಿಷೇಧಿಸಿತ್ತು. ಈ ಕ್ರಮದಿಂದ ಆಹಾರ ಪದಾರ್ಥಗಳ ದರಗಳು ನಿಯಂತ್ರಣದಲ್ಲಿವೆ. ಆದರೆ ಅಕ್ಕಿ ದರ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 14.5 ಪ್ರತಿಶತ ಹೆಚ್ಚಾಗಿಯೇ ಇದೆ. ಬೆಲೆ ನಿಯಂತ್ರಣಕ್ಕೂ ಬರುತ್ತಿಲ್ಲ.

ಮುಂದಿನ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರಕಾರ ಅಹಾರ ಪದಾರ್ಥಗಳ ದರಗಳ ಮೇಲೆ ತೀವ್ರ ನಿಗಾ ಇರಿಸಿದ್ದು ಗೋಧಿ, ಅಕ್ಕಿ, ಸಕ್ಕರೆ ಮತ್ತು ನೀರುಳ್ಳಿ ಮೊದಲಾದ ದಿನ ಬಳಕೆ ವಸ್ತುಗಳ ಬೆಲೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.

ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಬೆಂಗಳೂರಿನಲ್ಲಿ ಎನ್ಸಿಸಿಎಫ್‍ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಸ್ಥಳಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ತಲುಪಿಸುವ ಪ್ಲಾನ್ ಮಾಡಿಕೊಂಡಿದೆ.

ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಣ್ಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ, ಜೆ.ಸಿ. ನಗರ, ಡೈರಿ ಸರ್ಕಲ, ಕೊಡಿಗೆಹಳ್ಳಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವ್ಯಾನ್ ಮೂಲಕ ಅಕ್ಕಿ ಪೂರೈಸಿ ಮನೆ ಮನೆಗೆ ತಲುಪಿಸಲಾಗುತ್ತದೆ.

RELATED ARTICLES

Latest News