ಬೆಂಗಳೂರು, ಅ.18- ಆದಾಯ ತೆರಿಗೆ ದಾಳಿಯನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಿದ್ದ ಬಿಜೆಪಿಗೆ, ತೀರುಗೇಟು ನೀಡಲಾಗಿದ್ದು, ಬಿಜೆಪಿ ಮತ್ತು ಭ್ರಷ್ಟಚಾರ.. ಇದು ಜನ್ಮಜನ್ಮದ ನಂಟು ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟರ್‍ನಲ್ಲಿ ಹಗರಣಗಳಲ್ಲಿ ಸಿಲುಕಿದ ಬಿಜೆಪಿಯವರ ಹೆಸರು ಮತ್ತು ಭಾವಚಿತ್ರವನ್ನು ಹಾಕಲಾಗಿದೆ. ಬಿಜೆಪಿ ನಾಯಕರೇ ನಿಮಗೆ ಆತ್ಮಸಾಕ್ಷಿ ಇದ್ದರೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾಗಿ ಇಷ್ಟೊತ್ತಿಗೆ ಪಕ್ಷ ವಿಸರ್ಜನೆ ಮಾಡಬೇಕಿತ್ತು ಎಂದು ಟಾಂಗ್ ನೀಡಲಾಗಿದೆ.
ಜೈಲು ಪಾಲಾದ ಬಿಜೆಪಿ ನಾಯಕರು ಎಂಬ ತಲೆಬಹರದಡಿ ಮಾಜಿಮುಖ್ಯಮಂತ್ರಿ ಯಡಿಯೂರಪ್ಪ. ಜನಾರ್ದನ ರೆಡ್ಡಿ, ಕಟ್ಟಾಸುಬ್ರಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ ಹೆಸರು ಮತ್ತು ಪೋಟೋ ಹಾಕಲಾಗಿದೆ.
“ಕಾಂಗ್ರೆಸ್ ಬಂದಿದೆ, ಲೂಟಿ ಜೋರಾಗಿದೆ, ಹೈಕಮಾಂಡ್ ಜೇಬು ತುಂಬಿದೆ”
ಶೇ.40ರಷ್ಟು ಕಮಿಷನ್ ಆರೋಪದಲ್ಲಿ ಈಶ್ವರಪ್ಪ, ಮುನಿರತ್ನ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಡಾ.ಸಿ.ಎನ್.ಅಶ್ವಥ್‍ನಾರಾಯಣ್, ಬಿ.ವೈ.ವಿಜಯೇಂದ್ರ, ಅರಗಜ್ಞಾನೇಂದ್ರ ಅವರ ಹೆಸರುಗಳು, ಬಿಟ್‍ಕಾಯಿನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ರಾಯರೆಡ್ಡಿ, ನಳೀನ್‍ಕುಮಾರ್ ಕಟೀಲ್, ಲಂಚ ಸ್ವಿಕರಿಸುವಾಗ ಸಿಕ್ಕಿ ಬಿದ್ದವರ ಸಾಲಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್ ಮಾಡಾಳ್ ಹೆಸರು ಕೇಳಿ ಬಂದಿದೆ ಎಂದು ಪೋಸ್ಟರ್‍ನಲ್ಲಿ ವಿವರಿಸಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಹಣ ಪಡೆದು ವಂಚಿಸಿದ್ದ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಬಿ.ಎಲ್.ಸಂತೋಶ್, ಸುನೀಲ್ ಕುಮಾರ್, ಸಿ.ಟಿ.ರವಿ ಹೆಸರು ಹೇಳಿ ಬಂದಿದೆ ಎಂದು ದೂರಲಾಗಿದೆ.