Friday, November 22, 2024
Homeರಾಜ್ಯಲಂಚ ಕೇಳಿದ್ದೇನೆ ಎಂದು ಹೇಳಿದರೆ ಅದೇ ದಿನ ರಾಜಕೀಯ ನಿವೃತ್ತಿ : ಸಿಎಂ ಸಿದ್ದರಾಮಯ್ಯ

ಲಂಚ ಕೇಳಿದ್ದೇನೆ ಎಂದು ಹೇಳಿದರೆ ಅದೇ ದಿನ ರಾಜಕೀಯ ನಿವೃತ್ತಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.4- ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಐದು ಪೈಸೆ ಲಂಚ ಕೇಳಿದ್ದೇನೆ ಎಂದು ಯಾವುದಾದರೂ ಗುತ್ತಿಗೆದಾರರು ಹೇಳಿದರೆ ಅದೇ ದಿನ ನಾನು ರಾಜೀನಾಮೆ ನೀಡುತ್ತೇನೆ ಮತ್ತು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಇಂದಿನಿಂದ ಆರಂಭವಾದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಮಾವೇಶ 2024ರಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಜೆಟ್‍ಗಳನ್ನು ಮಂಡನೆ ಮಾಡಿದ್ದು, ಹಣಕಾಸು ಸಚಿವನಾಗಿ ಎಲ್‍ಒಸಿ ಬಿಡುಗಡೆಗೆ ಗುತ್ತಿಗೆದಾರರಿಂದ ಐದು ಪೈಸೆ ಲಂಚ ಕೇಳಿದ್ದೇನೆ ಎಂದರೆ ಯಾರಾದರೂ ಹೇಳಿದರೆ ಅವತ್ತೆ ರಾಜೀನಾಮೆ ಕೊಡುತ್ತೇನೆ ಮತ್ತು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ಗುತ್ತಿಗೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದು ನಿಜ, ಅದನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕಾಗುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಗುತ್ತಿಗೆದದಾರರ ಪಾತ್ರ ಪ್ರಮುಖವಾಗಿದೆ, ಸರ್ಕಾರದ ಜೊತೆ ಕೈ ಜೊಡಿಸಬೇಕು. ಪಾರದರ್ಶಕತೆ ಪಾಲಿಸಬೇಕು ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಕಾರ್ಯಕ್ರಮದಲ್ಲಿ ಏನು ಹೇಳುತ್ತಾರೆ ಎಂದು ಕೇಳಿಸಿಕೊಂಡು ಬಂದು ನನಗೆ ಹೇಳಲು ಸಚಿವ ಸತೀಶ್ ಜಾರಕಿಹೊಳಿಗೆ ಸೂಚಿಸಿದ್ದೇನೆ. ಸಂಘದಿಂದ ಕೊಟ್ಟಿರುವ ಮನವಿಯಲ್ಲಿ ಗುತ್ತಿಗೆಯಲ್ಲಿ ಪ್ಯಾಕೇಜ್ ಪದ್ಧತಿ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮೊನ್ನೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯ ಹೆದ್ಧಾರಿಗೆ ಕಾಮಗಾರಿ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಅದರಲ್ಲಿ ಪ್ಯಾಕೇಜ್ ಇಲ್ಲ. ಇದರಿಂದ ಸಣ್ಣ ಗುತ್ತಿಗೆದಾರರಿಗೆ, ರಾಜ್ಯದವರಿಗೆ ಅನುಕೂಲವಾಗಲಿದೆ. ಈ ಹಿಂದೆ ಹೊರ ರಾಜ್ಯದ ಗುತ್ತಿಗೆದಾರರು ರಾಜ್ಯಕ್ಕೆ ಬಂದು ಬಿಟ್ಟಿದ್ದಾರೆ. ಅವರನ್ನೆಲ್ಲಾ ಒಮ್ಮೆಲೆ ಓಡಿಸಲಾಗುವುದಿಲ್ಲ. ಮುಂದೆ ರಾಜ್ಯದ ಗುತ್ತಿಗೆದಾರರಿಗೆ ಆದ್ಯತೆ ನೀಡಲಾಗುವುದು ಎಂದರು.

ಕೆಂಪಣ್ಣ ಸರ್ಕಾರ ರಚನೆಯಾದ ಮೇಲೆ ನಾಲ್ಕೈದು ಬಾರಿ ನನ್ನನ್ನು ಭೇಟಿ ಮಾಡಿದ್ದಾರೆ, ಆಗೆಲ್ಲಾ ಪ್ಯಾಕೇಜ್ ರದ್ದು ಮಾಡಬೇಕು, ಬಾಕಿ ಬಿಲ್ ಕೊಡಬೇಕು ಎಂದು ಹೇಳಿದ್ದಾರೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಇಷ್ಟು ಬಾಕಿ ಬಿಲ್ ಇರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಜಾಸ್ತಿಯಾಗಿದೆ. ಸರ್ಕಾರದಲ್ಲಿ ಹಣವಿಲ್ಲದಿದ್ದರೂ, ಮಂಡಳಿಗಳಲ್ಲಿ ಅನುಮೋದನೆ ಪಡೆದು 1.20 ಲಕ್ಷ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಟೆಂಡರ್ ಕರೆದು ಗುತ್ತಿಗೆ ನೀಡಿದ್ದಾರೆ. ಬಾಕಿ ಬಿಲ್‍ಗಳನ್ನು ಒಮ್ಮೆಲೆ ಬಿಡುಗಡೆ ಮಾಡಿ ಎಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ಹಾಗೆ ಹಣ ಬಿಡುಗಡೆ ಮಾಡಲು ನಾನೇನು ನೋಟು ಪ್ರಿಂಟ್ ಮಾಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಸುಳ್ಳು ಹೇಳಲಿಕ್ಕಾವುದಿಲ್ಲ, ಬಾಕಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ ಅವರದು ತಪ್ಪಿದೆ ಎಂದು ನಾನು ಹೇಳುವುದಿಲ್ಲ. ಆದರೆ ಹಣ ಇಲ್ಲದೆ ಇದ್ದರೂ ಕೆಲಸ ಮಾಡಬಾರದು ಎಂದರು. ಸರ್ಕಾರ ಹೇಳಿದ್ದಕ್ಕೆ ನಾವು ಕೆಲಸ ಮಾಡಿದ್ದೇವೆ ಎಂದು ಗುತ್ತಿಗೆದಾರರು ಹೇಳಿದರು, ಮೂರನೇ ಒಂದು ಭಾಗ ಅನುದಾನ ಲಭ್ಯವಿದ್ದರೆ ಮಾತ್ರ ಕೆಲಸ ಮಾಡಬೇಕು. ಇಲ್ಲದೆ ಹೋದರೆ ನಾನು ಹೇಳಿದರೂ ಕೆಲಸ ಮಾಡಬಾರದು, ಸರ್ಕಾರ ಹೇಳುತ್ತದೆ ಎಂದು ಕೆಲಸ ಮಾಡಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.

ಗುತ್ತಿಗೆದಾರರ ಸಂಘಕ್ಕೆ ಜಾಗ ಕೊಡಿ, ಅಲ್ಲಿ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯ ಸ್ಥಾಪನೆ ಮಾಡುತ್ತೇವೆ ಎಂದು ಸಂಘದಿಂದ ಮನವಿ ಸಲ್ಲಿಸಲಾಗಿದೆ. ಇದು ಸಂತೋಷದ ವಿಚಾರ, ಸಂಘದ ಪದಾಧಿಕಾರಿಗಳು ಜಾಗ ಹುಡುಕಿಕೊಟ್ಟರೆ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಬಳಿ ಬಂದ ಕೆಂಪಣ್ಣ ಕಂದಾಯ ಅಧಿಕಾರಿಗಳಿಗೆ ನೀವು ನಿರ್ದೇಶನ ಕೊಟ್ಟರೆ ಅವರು ಐದು ಎಕರೆ ಜಾಗ ಹುಡುಕಿಕೊಡುತ್ತಾರೆ ಎಂದರಲ್ಲದೆ, ಕಂದಾಯ ಭವನ ನಿರ್ಮಾಣಕ್ಕೆ ಇನ್ನೂ 2 ಕೋಟಿ ರೂಪಾಯಿಗಳ ಅಗತ್ಯ ಇದೆ ಎಂದಾಗ, ಸರ್ಕಾರದಿಂದ ಬಾಕಿ ಕೆಲಸ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಕೆಆರ್‍ಎಸ್ ಕಟ್ಟಿ ಎಷ್ಟು ವರ್ಷವಾಗಿದೆ. ಈಗಲೂ ಅದು ಸದೃಢವಾಗಿದೆ. ಗುಣಮಟ್ಟ ನಿಯಂತ್ರಣ ಹಾಗೂ ಪಾರದರ್ಶಕತೆ ಪಾಲನೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಹಿಂದೆ ಶೇ.40ರಷ್ಟು ಕಮಿಷನ್ ಲಂಚದ ವಿಚಾರಣೆಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಆಯೋಗ ಇನ್ನೂ ವರದಿ ನೀಡಿಲ್ಲ, ವರದಿ ಬಂದ ಮೇಲೆ ಶೇ.40ರಷ್ಟು ಕಮಿಷನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಲೂ ಯಾರಾದರೂ ಕಮಿಷನ್ ಕೇಳುತ್ತಿದರೆ ಸಂತ್ರಸ್ಥ ಗುತ್ತಿಗೆದಾರರು ಆಯೋಗಕ್ಕೆ ದೂರು ನೀಡಿ ಎಂದು ಸಲಹೆ ನೀಡಿದರು.

ನಮ್ಮ ಸರ್ಕಾರ ಭ್ರಷ್ಟಚಾರ ಮಟ್ಟ ಹಾಕಿ, ಜನಪರ ಹಾಗೂ ಸರ್ವತೋಮುಖ ಅಭಿವೃದ್ಧಿ ಕೆಲಸ ಮಾಡಲಿದೆ, ಗುತ್ತಿಗೆದಾರ ಸಹಕಾರ ಇಲ್ಲದೆ ಸರ್ಕಾರ ಒಳ್ಳೆಯ ಕೆಲಸ ಮಾಡಲು ಕಷ್ಟವಾಗುತ್ತದೆ. ಗುತ್ತಿಗೆದಾರರ ಯಾವುದೇ ಅಹವಾಲು ಇದ್ದರೂ ಕಾರ್ಯಕ್ರಮದಲ್ಲಿ ಇರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತನ್ನಿ ಸರ್ಕಾರ ಸ್ಪಂದಿಸಲಿದೆ. ನಾವು ನಿಮ್ಮ ಪರವಾಗಿದ್ದೇವೆ ಎಂದು ಹೇಳಿದರು.

ಒಂದೇ ಸಾರಿ ಬಿಲ್ ಕೊಡಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಬಜೆಟ್‍ನಲ್ಲಿ ಘೋಷಿಸಿತ್ತು. ಈವರೆಗೂ ಒಂದು ಕೂಡ ರೂಪಾಯಿ ಬಿಡುಗಡೆಯಾಗಿಲ್ಲ. ನಾವು ತೆರಿಗೆ ಸಂಗ್ರಹಿಸಿ ಕೊಟ್ಟರೆ ಕೇಂದ್ರ ಸರ್ಕಾರದಿಂದ 13 ಸಾವಿರ ರೂಪಾಯಿ ಮಾತ್ರ ವಾಪಾಸ್ ಬರುತ್ತಿದೆ. ಅದರಲ್ಲಿ ಸಂಬಳ ನೀಡಬೇಕು, ಬೇರೆಲ್ಲಾ ಕೆಲಸ ಮಾಡಬೇಕಿದೆ, ಜೊತೆಗೆ ಅಭಿವೃದ್ಧಿಯನ್ನೂ ಮಾಡಬೇಕು ಎಂದು ಹೇಳಿದರು.

ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಗುತ್ತಿಗೆದಾರರ ಸಂಘದ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಬೇಕಾದಂತೆ ಷರತ್ತು ಹಾಕಿ, ತಮಗೆ ಬೇಕಾದವರಿಗೆ ಗುತ್ತಿಗೆ ಸಿಗುವಂತೆ ಮಾಡುತ್ತಿದ್ದಾರೆ ಅದನ್ನು ತಪ್ಪಿಸಬೇಕು. ವಿವಿಧ ಇಲಾಖೆಗಳಲ್ಲಿ 18 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ, ಅದನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಜನರಿಗೆ ಭಾಗ್ಯ ಕೊಟ್ಟಂತೆ, ಗುತ್ತಿಗೆದಾರರಿಗೂ ಯಾವುದಾರೂ ಒಂದು ಭಾಗ್ಯ ನೀಡಬೇಕು. ನಿರ್ಮಿತಿ ಕೇಂದ್ರದಿಂದಲೇ ಭ್ರಷ್ಟಚಾರ ಆರಂಭವಾಗುತ್ತಿದೆ. ಅದನ್ನು ಸರಿ ಪಡಿಸಬೇಕು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಜಿಎಸ್‍ಟಿಯಿಂದಾಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಸತಿ ಸಚಿವ ಜಮೀರ ಅಹಮದ್ ಖಾನ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

Latest News