Friday, November 22, 2024
Homeರಾಜ್ಯಗೋಬಿ-ಕಬಾಬ್‌ ನಂತರ ಈಗ ಶವರ್ಮಾ ಬ್ಯಾನ್‌ ಮಾಡಲು ರಾಜ್ಯ ಸರ್ಕಾರ ಚಿಂತನೆ

ಗೋಬಿ-ಕಬಾಬ್‌ ನಂತರ ಈಗ ಶವರ್ಮಾ ಬ್ಯಾನ್‌ ಮಾಡಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಜೂ.30- ಗೋಬಿ ಮಂಚೂರಿ ಹಾಗೂ ಕಬಾಬ್‌ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.ಬೆಂಗಳೂರಿನಲ್ಲಿ ಶವರ್ಮಾ ಗುಣಮಟ್ಟ ಪರಿಶೀಲನೆ ನಡೆಸಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಬೆಚ್ಚಿ ಬೀಳಿಸುವ ಅಂಶ ಕಂಡು ಬಂದು ಬಂದಿದೆ. ಶವರ್ಮಾಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ಈಸ್ಟ್‌ ಪತ್ತೆಯಾಗಿದೆ. ಬೆಂಗಳೂರು ಮಾತ್ರವಲ್ಲ ಹುಬ್ಬಳ್ಳಿ, ಮೈಸೂರು, ತುಮಕೂರು, ಮಂಗಳೂರು, ಬಳ್ಳಾರಿ ಸೇರಿದಂತೆ ಹಲವೆಡೆ ಪರೀಕ್ಷೆ ನಡೆಸಲಾಗಿದೆ.

ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಕಂಡು ಬರುತ್ತಿದೆ. ಅಲ್ಲದೆ ಧೀರ್ಘ ಕಾಲದವರೆಗೂ ಶೇಖರಣೆ ಮಾಡುವುದರಿಂದ ಇದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಈಸ್ಟ್‌ ಉತ್ಪತ್ತಿಯಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಶವರ್ಮಾ ತಿನ್ನುವುದರಿಂದ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಾಧ್ಯಮಗಳಲ್ಲಿ ಶವರ್ಮಾ ಸೇವಿಸಿ ಫುಡ್‌ ಪಾಯ್ಸನ್‌ ಆಗಿರುವ ಕುರಿತು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೋರೇಷನ್‌ ವ್‌ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಶವರ್ಮಾದ ಆಹಾರ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿದೆ.

ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದರೆ 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ ಕಂಡು ಬಂದಿರುವುದರಿಂದ ಅಸುರಕ್ಷಿತ ಎಂದು ನಿರ್ಧರಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೇಳಿದೆ.

ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಶವರ್ಮಾ ತಯಾರಕರು ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ 2006ರ ಶೆಡ್ಯೂಲ್‌ 4ರ ಅನುಸಾರ ಕಾಪಾಡಲು ಸೂಚಿಸಲಾಗಿದೆ.

ಜತೆಗೆ ಶವರ್ಮಾವನ್ನು ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ಶವರ್ಮಾ ಆಹಾರ ತಯಾರಕರು ತಮ ಉದ್ದಿಮೆಗೆ ಎಫ್‌ಎಸ್‌‍ಎಸ್‌‍ಎಐ ನೋಂದಣಿ ಅಥವಾ ಪರವಾನಿಗೆಯನ್ನು ಪಡೆದುಕೊಳ್ಳುವುದಲ್ಲದೇ ಅದನ್ನು ತಮ ವ್ಯಾಪಾರ ಸ್ಥಳದಲ್ಲಿ ಪ್ರದರ್ಶಿಸಲು ಸೂಚಿಸಿದೆ. ಜತೆಗೆ ಸಾರ್ವಜನಿಕರು ನೋಂದಣಿ / ಪರವಾನಿಗೆಯನ್ನು ಪಡೆದುಕೊಂಡ ಮಾರಾಟಗಾರರಿಂದಲೇ ಶವರ್ಮಾವನ್ನು ಖದೀದಿಸಲು ಸೂಚಿಸಲಾಗಿದೆ.

ಮುಂದಿನ ಪರಿಶೀಲನೆ ವೇಳೆ ಆಹಾರ ತಯಾರಕರು ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ.

RELATED ARTICLES

Latest News