Tuesday, March 11, 2025
Homeರಾಜ್ಯನಾಳೆಯಿಂದ ವಿಧಾನಮಂಡಲದ ಜಂಟಿ ಅಧಿವೇಶ : ವಾಕ್ಸಮರಕ್ಕೆ ವೇದಿಕೆ ಸಿದ್ದ

ನಾಳೆಯಿಂದ ವಿಧಾನಮಂಡಲದ ಜಂಟಿ ಅಧಿವೇಶ : ವಾಕ್ಸಮರಕ್ಕೆ ವೇದಿಕೆ ಸಿದ್ದ

Karnataka legislature session to start on March 3

ಬೆಂಗಳೂರು, ಮಾ.2- ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಲು ವೇದಿಕೆಯಾಗಲಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ರಾಜ್ಯಪಾಲರನ್ನು ಬೀಳ್ಕೊಟ್ಟ ನಂತರ ಉಭಯ ಸದನಗಳು ಪ್ರತ್ಯೇಕವಾಗಿ ಸಮಾವೇಶಗೊಳ್ಳಲಿವೆ. ಇತ್ತೀಚೆಗೆ ಆಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ನಡೆಯುವುದು ಸಾಮಾನ್ಯವಾಗಿದೆ. ಈಗಾಗಲೇ ಪ್ರತಿಪಕ್ಷಗಳು ಪ್ರಸ್ತಾಪಿಸಿರುವ ಮೈಕ್ರೋ ಫೈನಾನ್ಸ್, ಬಾಣಂತಿಯರ ಸಾವು, ಕಾನೂನು ಮತ್ತು ಸುವ್ಯವಸ್ಥೆ ವಿಚಾರ, ಮೆ ಟ್ರೋ ರೈಲು ಪ್ರಯಾಣದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.

ಮೈಸೂರಿನ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ, ಮಹಾರಾಷ್ಟ್ರದಲ್ಲಿ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರಿಗೆ ಮಸಿ ಬಳಿದಿರುವ ಪ್ರಕರಣ, ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣಗಳು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವುದು, ಬಿಬಿಎಂಪಿಯನ್ನು 2 ರಿಂದ 7 ಪಾಲಿಕೆಗಳಾಗಿ ವಿಭಜಿಸಲು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಜಂಟಿ ಪರಿಶೀಲನಾ ಸಮಿತಿ ನೀಡಿರುವ ವರದಿ ಮೇಲೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುವ ಸಾಧ್ಯತೆಯಿದೆ.

ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಮನ್ವಯ ಸಮಿತಿ ಸಭೆ ನಡೆಸಿ ಸದನದಲ್ಲಿ ಆದ್ಯತೆ ಮೇಲೆ ಪ್ರಸ್ತಾಪಿಸಬೇಕಾಗಿರುವ ವಿಚಾರಗಳನ್ನು ಚರ್ಚಿಸೆ ಒಗ್ಗಟ್ಟಿನ ಹೋರಾಟ ನಡೆಸಲು ನಿರ್ಧರಿಸಿವೆ.ಕೆಪಿಎಸ್‌ಸಿ ನೇಮಕಾತಿ ವಿಚಾರದಲ್ಲಿ ಕೇಳಿಬಂದಿರುವ ಆರೋಪಗಳು, ರೈತರ ಆತ್ಮಹತ್ಯೆ ಪ್ರಕರಣಗಳು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪ, ಬೇಸಿಗೆಯಲ್ಲಿ ಉಂಟಾಗಲಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್, ಲೋಡ್ ಶೆಡ್ಡಿಂಗ್ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ-ಜೆಡಿಎಸ್ ಸಜ್ಜಾಗಿವೆ.

ಆಡಳಿತ ಪಕ್ಷ ಕೂಡ ಅಷ್ಟೇ ಪ್ರಬಲವಾಗಿ ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ತಯಾರಿ ನಡೆಸಿದೆ. ಬಿಜೆಪಿ-ಜೆಡಿಎಸ್ ಅಧಿಕಾರದಲ್ಲಿದ್ದಾಗ ಯಾವ ರೀತಿ ಆಡಳಿತ ನಡೆಸಿದ್ದವು ಎಂಬುದನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ.ಪಂಚಖಾತ್ರಿ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ವಿಳಂಬವನ್ನು ಪ್ರಮುಖ ಅಸ್ತ್ರವಾಗಿ ಪ್ರತಿಪಕ್ಷಗಳು ಬಳಸಿ ಸರ್ಕಾರ ಮತ್ತು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆಗಳಿವೆ.

ಅಷ್ಟೇ ಪ್ರಬಲವಾಗಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನೀಡಿದ ವಾಗ್ದಾನದಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿರುವ ವಿಚಾರವಾಗಿ ಸರ್ಕಾರ ಸಮರ್ಥನೆ ಮಾಡಿಕೊಳ್ಳಲಿದೆ. ಹೀಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಲವು ಜನಪರ ವಿಚಾರ, ಆಡಳಿತಾತ್ಮಕ ವಿಷಯಗಳು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿಕೆ ವಿಚಾರ ಸೇರಿದಂತೆ ಹತ್ತುಹಲವು ವಿಚಾರದ ಬಗ್ಗೆ ಪರಸ್ಪರ ಮಾತಿನ ಚಕಮಕಿ ನಡೆಯುವ ಸಾಧ್ಯತೆಗಳಿವೆ.ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆಯ ವಿಚಾರ ಪ್ರಸ್ತಾಪಗೊಂಡರೆ ಸರ್ಕಾರದ ವೈಫಲ್ಯವನ್ನು ಪ್ರತಿಪಕ್ಷಗಳು ಬೊಟ್ಟು ಮಾಡಿ ತೋರಿಸುವ ಸಾಧ್ಯತೆಗಳಿವೆ.

ಬಜೆಟ್ ಮಂಡನೆ :
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7 ರಂದು 2025-26 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಮುಂದಿನ ವಾರದಿಂದ ಮುಂಗಡ ಪತ್ರದ ಮೇಲೆ ಉಭಯಸದನಗಳಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಇಲಾಖೆವಾರು ಹಾಗೂ ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಆಡಳಿತ ಪಕ್ಷಗಳ ಶಾಸಕರು ಟೀಕೆ, ಟಿಪ್ಪಣಿ ಮಾಡುತ್ತಾ ಸರ್ಕಾರಕ್ಕೆ ಸಲಹೆಯನ್ನು ನೀಡುವ ಸಾಧ್ಯತೆಯಿದೆ. ಅದೇ ರೀತಿ ಆಡಳಿತ ಪಕ್ಷದ ಶಾಸಕರು ಕಳೆದ ಎರಡು ಬಜೆಟ್ ಘೋಷಣೆಗಳನ್ನು ಸಮರ್ಥನೆ ಮಾಡಿ ಈ ಬಜೆಟ್‌ಗೂ ಮೆಚ್ಚುಗೆ ಸೂಚಿಸುವ ಸಾಧ್ಯತೆಗಳಿವೆ.

ನಾಳೆಯಿಂದ ಮಾ.21 ರವರೆಗೆ ಅಧಿವೇಶನದ ಕಾರ್ಯಕಲಾಪಗಳು ನಿಗದಿಯಾಗಿವೆ. ಸದನದ ಕಾರ್ಯಕಲಾಪಗಳು ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಎಷ್ಟು ದಿನ ನಡೆಸಬೇಕೆಂಬ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಒಟ್ಟಾರೆ ಈ ಬಾರಿಯ ಜಂಟಿ ಹಾಗೂ ಬಜೆಟ್ ಅಧಿವೇಶನ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವಿನ ವಾಕ್ ಯುದ್ಧಕ್ಕೆ ಪ್ರಮುಖ ವೇದಿಕೆಯಾಗುವುದರಲ್ಲಿ ಸಂದೇಹವಿಲ್ಲ.

RELATED ARTICLES

Latest News