Thursday, December 5, 2024
Homeರಾಜ್ಯಅಪಘಾತದಲ್ಲಿ ಮೃತಪಟ್ಟ ಪ್ರೊಬೆಷನರಿ ಐಪಿಎಸ್ ಅಧಿಕಾರಿಗೆ ಸರ್ಕಾರಿ ಗೌರವ ಸಲ್ಲಿಕೆ

ಅಪಘಾತದಲ್ಲಿ ಮೃತಪಟ್ಟ ಪ್ರೊಬೆಷನರಿ ಐಪಿಎಸ್ ಅಧಿಕಾರಿಗೆ ಸರ್ಕಾರಿ ಗೌರವ ಸಲ್ಲಿಕೆ

Karnataka: Probationary IPS Officer Harshabardhan Dies In Car Accident While Reporting For Duty

ಹಾಸನ,ಡಿ.2- ಅಪಘಾತದಲ್ಲಿ ನಿಧನರಾಗಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರ ಮೃತದೇಹವನ್ನು ಡಿಎಆರ್ ಮೈದಾನದಲ್ಲಿಟ್ಟು ಅಂತಿಮ ನಮನದೊಂದಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ ಹಾಸನ ಜಿಲ್ಲೆಯ ಡಿವೈಎಸ್ಪಿಯಾಗಿ ಇಂದು ಅಧಿಕಾರ ವಹಿಸಿಕೊಳ್ಳ ಬೇಕಿತ್ತು.ಹಾಸನದ ಡಿಎಆರ್ ಕಾನ್‌್ಸಟೇಬಲ್ ಮಂಜೇಗೌಡ ಅವರು ಮೈಸೂರಿನಿಂದ ಹರ್ಷಬರ್ಧನ್ ಅವರನ್ನು ಬೊಲೆರೊ ಜೀಪ್ನಲ್ಲಿ ಹಾಸನಕ್ಕೆ ಕರೆತರುತ್ತಿದ್ದಾಗ ನಿನ್ನೆ ಸಂಜೆ ಕಿತ್ತಾನೆ ಗಡಿ ಬಳಿ ಜೀಪ್ ಟೈರ್ ಸ್ಫೋಟಗೊಂಡು ಉರುಳಿಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟಾಗಿತ್ತು.
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ಹಾಸನದ ಡಿಎಆರ್ ಮೈದಾನದಲ್ಲಿ ಅಂತಿಮ ನಮನ ಹಾಗೂ ಸರ್ಕಾರಿ ಗೌರವ ಸಲ್ಲಿಸಿ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಆ್ಯಂಬುಲೆನ್‌್ಸ ಮೂಲಕ ರವಾನಿಸಲಾಯಿತು.

ಬೆಂಗಳೂರಿನ ಯಲಹಂಕದಲ್ಲಿನ ಎಪಿಟಿಎಸ್ ಮೈದಾನದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಇಲಾಖೆಯ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಸಹ ನಗರಕ್ಕೆ ಬಂದಿದ್ದಾರೆ. ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರು ಆಸ್ಪತ್ರೆಗೆ ತೆರಳಿ ಅಧಿಕಾರಿಯ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಮೂಲತಃ ಮಧ್ಯಪ್ರದೇಶದ ಜಬಲ್ಪುರ ಮೂಲದ ಹರ್ಷಬರ್ಧನ್ರವರು ಬಿಇ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. 2023ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಇವರು ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕು ವಾರ ತರಬೇತಿ ಪೂರ್ಣಗೊಳಿಸಿದ್ದರು. ಅಲ್ಲದೆ, ಆರು ತಿಂಗಳು ಹಾಸನದ ಡಿಸ್ಟ್ರಿಕ್ ಪ್ರಾಕ್ಟಿಕಲ್ ತರಬೇತಿ ಪಡೆಯಬೇಕಾಗಿತ್ತು. ಅವರು ಎಸಿ ಕೇಡರ್ ಅಧಿಕಾರಿಯಾಗಿ ಮಧ್ಯಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಸತತ 4 ಗಂಟೆ ಪ್ರಯತ್ನಿಸಿದರೂ ಚಿಕಿತ್ಸೆ ಫಲಿಸಲಿಲ್ಲ :
ಹಾಸನ,ಡಿ.2- ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್(29) ಅವರು ವೃತ್ತಿ ಬದುಕು ಆರಂಭಿಸುವ ಮುನ್ನವೇ ಅಂತ್ಯಗೊಂಡಿರುವುದು ದುರದೃಷ್ಟಕರ. ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಹರ್ಷಬರ್ಧನ್ ಅವರಿಗೆ ವೈದ್ಯರ ತಂಡ ಸತತ 4 ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ವರೂಪ್ ಪ್ರಕಾಶ್ ರಿಂದ ಅಂತಿಮ ನಮನ

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಅಪಘಾತವಾಗಿದೆ ಎಂದು ಆಸ್ಪತ್ರೆಗೆ ಈ ಅಧಿಕಾರಿಯನ್ನು ಕರೆತರಲಾಗಿತ್ತು. ತಕ್ಷಣ ನಮ ವೈದ್ಯರ ತಂಡ ಪರೀಕ್ಷಿಸಿದಾಗ ಅವರು ಉಸಿರಾಡುತ್ತಿರಲಿಲ್ಲ. ಕೂಡಲೇ ವೆಂಟಿಲೇಟರ್ ಹಾಗೂ ಟ್ಯೂಬ್ ಹಾಕಿ ಉಸಿರಾಟಕ್ಕೆ ಪ್ರಯತ್ನಿಸಲಾಯಿತು. ಬಿಪಿ ಲೋ ಆಗಿದ್ದರಿಂದ ಔಷಧಿ ನೀಡಲಾಯಿತು. ನ್ಯೂರೋ ಸರ್ಜನ್ ಸಹ ಬಂದು ಪರೀಕ್ಷಿಸಿದರು. ಸಿಟಿ ಸ್ಕ್ಯಾನ್ನಲ್ಲಿ ಮೆದುಳಿಗೆ ಅಲ್ಲಲ್ಲಿ ತೀವ್ರ ಗಾಯಗಳಾಗಿರುವುದು ಗೊತ್ತಾಯಿತು. ಏನೆಲ್ಲಾ ಸಾಧ್ಯವೋ ಅದನ್ನೆಲ್ಲ ಮಾಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು.

ಐಪಿಎಸ್ ಅಧಿಕಾರಿಗೆ ಅಪಘಾತವಾಗಿ ಆಸ್ಪತ್ರೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಮಂಗಳೂರು, ಮೈಸೂರು, ಬೆಂಗಳೂರು ಅಲ್ಲದೆ ದೆಹಲಿಯಿಂದಲೂ ವೈದ್ಯರು ಫೋನ್ ಮಾಡಿ ಏನೆಲ್ಲಾ ಚಿಕಿತ್ಸೆ ಮಾಡಬೇಕೆಂಬುದನ್ನು ಸಲಹೆ ನೀಡಿದರು. ಪೊಲೀಸ್ ಅಧಿಕಾರಿಗಳು ಸಹ ಎಲ್ಲಾ ಸಹಕಾರ ಕೊಟ್ಟರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ವಿಷಾದಿಸಿದರು.

ಒಬ್ಬ ಯುವ ಪೊಲೀಸ್ ಅಧಿಕಾರಿಯ ಸಾವಿನಿಂದ ದೇಶಕ್ಕೆ ನಷ್ಟವಾಗಿದೆ. ಆ ಜಾಗದಲ್ಲಿ ಸಾಮಾನ್ಯ ವ್ಯಕ್ತಿಯಿದ್ದರೂ ಸಹ ನಾವು ಇದೇ ರೀತಿ ಉತ್ತಮ ಚಿಕಿತ್ಸೆ ನೀಡುತ್ತಿದ್ದೆವು. ಬೆಳೆದ ಮರ ಫಸಲು ಕೊಡುವ ಸಮಯದಲ್ಲಿ ಬಾಡಿ ಹೋಗಿರುವುದು ದುರದೃಷ್ಟಕರ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಆ ದೇವರು ನೀಡಲಿ ಎಂದು ಹೇಳಿದರು.

ಸಿಎಂ ಸಂತಾಪ :
ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು.ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತಕ್ಕೆ ಶಾಂತಿ ಸಿಗಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿ, ಮೃತರ ಕುಟುಂಬಕ್ಕೆ ತಮ ಸಂತಾಪ ಸೂಚಿಸಿದ್ದಾರೆ.

ವಿಜಯೇಂದ್ರ ಕಂಬನಿ :
ಭೀಕರ ರಸ್ತೆ ಆಫಘಾತದಲ್ಲಿ ಸಾವನ್ನಪ್ಪಿದ ಪೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ . ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ತಮ ಸಾಮಾಜಿಕ ಜಾಲ ತಾಣ ಎಕ್‌್ಸನಲ್ಲಿ ಶೋಕ ಸಂದೇಶ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ಕೇಡರ್ ಗೆ ಆಯ್ಕೆಯಾಗಿದ್ದ ಬಿಹಾರ ಮೂಲದ ಪೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ತೆರಳುವಾಗ ಮಾರ್ಗಮಧ್ಯೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ದುರಾದೃಷ್ಟಕರ ಎಂದು ವಿಷಾದಿಸಿದ್ದಾರೆ.

ಐಪಿಎಸ್ ಹುದ್ದೆಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ, ಹರ್ಷಬರ್ಧನ್ ಅವರ ಯಶಸ್ಸಿನ ಹಿಂದಿನ ಅವರ ಪರಿಶ್ರಮ, ಕುಟುಂಬದ ತ್ಯಾಗ ಹಾಗೂ ಪ್ರೋತ್ಸಾಹವನ್ನು ಮರೆಯಲಾಗದು. ಭವಿಷ್ಯತ್ತಿನಲ್ಲಿ ನಾಡಿನ ಸೇವೆಗೆ ಮಹತ್ವದ ಕೊಡುಗೆ ನೀಡಬಹುದಾದ ಒಬ್ಬ ಅಧಿಕಾರಿಯು ನಿರ್ದಯವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಮೃತ ಹರ್ಷಬರ್ಧನ್ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತಕ್ಕೆ ಸದ್ಗತಿ ದೊರೆಯಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ.

RELATED ARTICLES

Latest News