ರಾಜ್ಯದಲ್ಲಿ ಇನ್ನೂ 3 ದಿನ ಮುಂದುವರೆಯಲಿದೆ ಮಳೆ
ಬೆಂಗಳೂರು, ಮೇ 21-ರಾಜ್ಯದ ಒಳನಾಡಿನಲ್ಲಿ ಮಳೆ ಮುಂದುವರೆದಿದ್ದು, ನೈರುತ್ಯ ಮುಂಗಾರು ಆರಂಭಕ್ಕೆ ಪೂರಕವಾದ ಲಕ್ಷಣಗಳು ಗೋಚರಿಸುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಭಾಗಶಃ ಮೋಡ ಕವಿದ ವಾತಾವರಣ ಹಾಗೂ ಬಲವಾದ ಮೇಲ್ಮೈ ಗಾಳಿ ಬೀಸುತ್ತಿದೆ. ಸಂಜೆ ಹಾಗೂ ರಾತ್ರಿ ವೇಳೆ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಅವರು ಈ ಸಂಜೆಗೆ ತಿಳಿಸಿದರು.
ವಾಯುಭಾರ ಕುಸಿತವು ಮುಂದಿನ ದಿನಗಳಲ್ಲಿ ಚಂಡ ಮಾರುತವಾಗಿ ಮಾರ್ಪಾಡಾಗುವ ಮುನ್ಸೂಚನೆಗಳಿವೆ. ಸದ್ಯಕ್ಕೆ ಅದು ಒಡಿಸ್ಸಾ ಕಡೆ ಸಾಗುವ ಸುಳಿವಿರುವಿರುವುದರಿಂದ ಮೇ 26, 27ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಎಂದು ಅವರು ಹೇಳಿದರು.
ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತ ಉಂಟಾದ ಬಳಿಕ ರಾಜ್ಯದಲ್ಲಿ ಮಳೆ ನಿರಂತರವಾಗಿ ಮುಂದುವರಿದೆ. ಈಗಾಗಲೇ ಕೆಲವು ಭಾಗಗಳಲ್ಲಿ ಮೇ ತಿಂಗಳ ವಾಡಿಕೆ ಪ್ರಮಾಣದಷ್ಟು ಮಳೆಯಾಗಿದೆ.
ಕೋಲಾರ, ಬೆಂಗಳೂರು, ರಾಮನಗರ, ತುಮಕೂರು, ಮಂಡ್ಯ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುತ್ತಿದೆ. ಕೆಲವೆಡೆ ಚದುರಿದಂತೆ ಸಾಧಾರಣಾ ಮಳೆಯಾದ ವರದಿಯಾಗಿದೆ ಎಂದು ಅವರು ಹೇಳಿದರು.
ನಿರೀಕ್ಷೆಯಂತೆ ಜೂನ್ ಆರಂಭದಲ್ಲಿ ಮುಂಗಾರು ಮಳೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದಕ್ಕೆ ಪೂರಕವಾದ ಗಾಳಿ, ಮೋಡ, ಮಳೆಯ ವಾತಾವರಣ ಕಂಡುಬರುತ್ತಿದೆ. ರೈತರು ಕೂಡ ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದರು.