ಬೆಂಗಳೂರು,ಆ.8- ಜುಲೈನಲ್ಲಿ ಆರ್ಭಟಿಸಿದ್ದ ಮುಂಗಾರು ಮಳೆ ಆಗಸ್ಟ್‍ನಲ್ಲಿ ಮಂಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನದಿಗಳ ಪ್ರವಾಹವು ಇಳಿಕೆಯಾಗಿದೆ. ತುಂಗಭದ್ರಾ, ಕೃಷ್ಣ ನದಿ ಹೊರತುಪಡಿಸಿ ಬಹುತೇಕ ನದಿಗಳ ಅಬ್ಬರ ತಗ್ಗಿದೆ. ಇದರಿಂದ ಪ್ರಮುಖ ಜಲಾಶಯಗಳ ಒಳಹರಿವು ಗಣನೀಯವಾಗಿ ಇಳಿಕೆಯಾಗಿದ್ದು, ಹೊರಹರಿವು ಕೂಡ ಕಡಿಮೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದೆ. ಆದರೆ ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ.
ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಒಂದೆರೆಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಆ.1 ರಿಂದ ಇಲ್ಲಿವರೆಗೆ ಮಳೆ ಪ್ರಮಾಣ ಇಲ್ಲಿಯವರೆಗೆ 76 ಮಿ.ಮೀ. ಮಳೆಯಾಗಿದೆ.
ಈ ಅವಧಿಯಲ್ಲಿ 67 ಮಿ.ಮೀ. ವಾಡಿಕೆ ಪ್ರಮಾಣದ ಮಳೆ ರಾಜ್ಯದಲ್ಲಿದ್ದು, ವಾಡಿಕೆಗಿಂತ ಶೇ. 15ರಷ್ಟು ಹೆಚ್ಚು ಮಳೆಯಾಗಿದೆ. ಜೂನ್‍ನಿಂದ ಇಲ್ಲಿವರೆಗೆ 537 ಮಿ.ಮೀ. ವಾಡಿಕೆ ಮಳೆ ಪ್ರಮಾಣವಿದ್ದು, 688 ಮಿ.ಮೀ.ನಷ್ಟು ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.28 ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ತುಂಗಾ, ಭದ್ರಾ, ಶರಾವತಿ, ಕಾವೇರಿ, ಹೇಮಾವತಿ, ಕಬಿನಿ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಆತಂಕದ ಸ್ಥಿತಿ ದೂರವಾಗಿದೆ.
ಆರ್ಭಟಿಸುತ್ತಿದ್ದ ಮಳೆ ಕಳೆದ ಒಂದು ವಾರದಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಶಾಂತವಾಗಿದೆ. ಚದುರಿದಂತೆ ಮಳೆಯಾಗುತ್ತಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷ್ಣ ನದಿಯ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ಆಲಮಟ್ಟಿಗೆ 2.77 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಅದೇ ರೀತಿ ನಾರಾಯಣಪುರ ಜಲಾಶಯಕ್ಕೂ 2 ಲಕ್ಷ ಕ್ಯೂಸೆಕ್ಸ್‍ಗೂ ಹೆಚ್ಚು ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾಶಯಕ್ಕೂ 57 ಸಾವಿರ ಕ್ಯೂಸೆಕ್ಸ್ ಹೆಚ್ಚು ನೀರು ಹರಿದುಬರುತ್ತಿದೆ.
ಈಗಾಗಲೇ ಈ ಮೂರೂ ಜಲಾಶಯಗಳು ಭರ್ತಿಯ ಹಂತ ತಲುಪಿರುವುದರಿಂದ ಭಾರಿ ಪ್ರಮಾಣದಲ್ಲಿ ಜಲಾಶಯದಿಂದ ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಜಲಾನಯನ ಭಾಗದಲ್ಲಿ ಪ್ರವಾಹದ ಭೀತಿ ಮುಂದುವರೆದಿದೆ.