Thursday, December 12, 2024
Homeಇದೀಗ ಬಂದ ಸುದ್ದಿನಾಡಿನೆಲ್ಲೆಡೆ ರಾರಾಜಿಸಿದ ಕನ್ನಡದ ವೈಭವ

ನಾಡಿನೆಲ್ಲೆಡೆ ರಾರಾಜಿಸಿದ ಕನ್ನಡದ ವೈಭವ

ಬೆಂಗಳೂರು,ನ.1- ನಾಡಿನಾದ್ಯಂತ ವೈಭವದ ಕನ್ನಡ ರಾಜ್ಯೋತ್ಸವ ಜರುಗಿತು. ಬೀದರ್‌ನಿಂದ ಚಾಮರಾಜನಗರದವರೆಗೆ , ಬಳ್ಳಾರಿಯಿಂದ ಕೋಲಾರದ ವರೆಗೆ ಎಲ್ಲೆಡೆ ಕನ್ನಡದ ವೈಭವ ಮನೆ ಮಾಡಿತ್ತು.
ಹಳ್ಳಿ ಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಕನ್ನಡದ ಬಾವುಟಗಳನ್ನು ಹಾರಿಸುವ ಮೂಲಕ ಸಂಭ್ರಮದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಜನ ನಾಡಿನ ವೈಭವವನ್ನು ಮೆರೆದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಧ್ವಜಾರೋಹಣ ನೆರವೇರಿಸಿ ಕನ್ನಡದ ಕಹಳೆ ಮೊಳಗಿಸಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡದ ವೈಭವಕ್ಕೆ ಮೆರಗು ನೀಡಿದರು.

ಎಲ್ಲೆಡೆ ಶಾಲಾಕಾಲೇಜು ವಿದ್ಯಾರ್ಥಿಗಳು, ಕನ್ನಡ ಧ್ವಜ ಹಿಡಿದು ಪಥ ಸಂಚಲನ ಮಾಡುವ ಮೂಲಕ ಕರ್ನಾಟಕದ ಕನ್ನಡ ಽೕಃಶಕ್ತಿ ಪ್ರದರ್ಶಿಸಿದರು. 69ನೇ ಕನ್ನಡ ರಾಜ್ಯೋತ್ಸವ ಜೊತೆಗೆ ಕರ್ನಾಟಕ ಎಂಬ ಹೆಸರು ಬಂದು 50 ವರ್ಷ ತುಂಬಿದ ಹಿನ್ನಲೆಯಲ್ಲಿ ಸುವರ್ಣ ವರ್ಷಾಚರಣೆಯ ಸಂಭ್ರಮ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ವಿಜೃಂಭಿಸಿತು.

ಸರ್ಕಾರ ಶಾಲಾಕಾಲೇಜುಗಳಲ್ಲದೆ ಕನ್ನಡಪರ ಸಂಘಟನೆಗಳು, ನಾಗರಿಕ ಸಂಘಟನೆಗಳು, ಸ್ವಯಂಸೇವಾ ಸಂಘಗಳು, ಕಾರ್ಪೋರೇಟ್‌ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಘಸಂಸ್ಥೆಗಳು ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ವೈಭವದ ಆಚರಣೆಗೆ ಮತ್ತಷ್ಟು ಮೆರಗು ನೀಡಿದ್ದವು.
ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರ ಮತ್ತು ಕನ್ನಡ ಪರ ಸಂಘಟನೆಗಳಿಗಷ್ಟೇ ಕನ್ನಡ ರಾಜ್ಯೋತ್ಸವ ಸೀಮಿತವಾಗಿತ್ತು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಎಲ್ಲಾ ಕೈಗಾರಿಕಾ ಸಂಸ್ಥೆಗಳು, ಕಾರ್ಪೋರೇಟ್‌ ಸಂಸ್ಥೆಗಳು, ಐಟಿಬಿಟಿ ಸಂಸ್ಥೆಗಳು, ಎಲ್ಲಾ ಶಾಲಾ ಕಾಲೇಜುಗಳು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸಬೇಕೆಂಬ ಆದೇಶ ನೀಡಿದ ಹಿನ್ನಲೆಯಲ್ಲಿ ಇಂದು ಎಲ್ಲೆಡೆ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಹಿಂದಿಗಿಂತಲೂ ಇಂದಿನ ಕನ್ನಡ ರಾಜ್ಯೋತ್ಸವ ಅತ್ಯಂತ ವೈಭವವಾಗಿತ್ತು. ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದ್ದವು. ಅಬಾಲವೃದ್ಧರಾದಿಯಾಗಿ ಹಳದಿ-ಕೆಂಪು ಬಾವುಟಗಳನ್ನು ಹಿಡಿದು ಕನ್ನಡ ರಾಜ್ಯೋತ್ಸವ ಆಚರಿಸಿ ಜೈಕಾರದ ಘೋಷಣೆಗಳನ್ನು ಮೊಳಗಿಸಿದ್ದು ವಿಶೇಷವಾಗಿತ್ತು. ಆಟೋ ನಿಲ್ದಾಣ, ಬಸ್‌ ನಿಲ್ದಾಣ, ಉದ್ಯಾನವನ ಸೇರಿದಂತೆ ಎಲ್ಲೆಡೆ ಕನ್ನಡದ ಬಾವುಟ ಹಾರಾಡುತ್ತಿತ್ತು. ಕರ್ನಾಟಕ ರಾಜ್ಯೋತ್ಸವ ಕನ್ನಡಮಯವಾಗಿತ್ತು.

ಕಲ್ಯಾಣ ಕರ್ನಾಟಕ, ಹೈದರಾಬಾದ್‌ಕರ್ನಾಟಕ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲೆಡೆ ಅದ್ಧೂರಿ ಕನ್ನಡ ರಾಜ್ಯೋತ್ಸವದ ಆಚರಣೆ ಕಣ್ಮನ ಸೆಳೆಯಿತು.

RELATED ARTICLES

Latest News