Saturday, May 4, 2024
Homeರಾಜ್ಯರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಕೆ

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಕೆ

ಬೆಂಗಳೂರು,ನ.7- ಕಳೆದ ನಾಲ್ಕೈದು ದಿನಗಳಿಂದ ಚೇತರಿಕೆ ಕಂಡಿರುವ ಹಿಂಗಾರು ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗಿದ್ದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಚದುರಿದಂತೆ ಮಳೆಯಾಗಿದೆ.

ಬೆಂಗಳೂರಿನ ಜಕ್ಕೂರಿನಲ್ಲಿ 164 ಮಿ.ಮೀನಷ್ಟು ಭಾರೀ ಮಳೆಯಾಗಿದೆ. ಉತ್ತರಕರ್ನಾಟಕ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲೂ ಮಳೆಯಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

BREAKING : ಅಮೆರಿಕದ ಒತ್ತಡಕ್ಕೆ ಮಣಿದ ಇಸ್ರೇಲ್, ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ

ನಿನ್ನೆ ಸಂಜೆ ಆರಂಭವಾದ ಮಳೆ ತಡರಾತ್ರಿಯವರೆಗೂ ಹಲವು ಕಡೆಗಳಲ್ಲಿ ನಿರಂತರವಾಗಿ ಸುರಿದಿದೆ. ಇದರಿಂದ ರಸ್ತೆಗಳು ಕಾಲುವೆಗಳಂತೆ ನೀರು ತುಂಬಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ರಾಜ್ಯದ ಒಳನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕೆಲವೆಡೆ ಹಳ್ಳ-ಕೊಳ್ಳಗಳು ಕೂಡ ತುಂಬಿ ಹರಿದಿವೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಗಾಳಿಯಿಂದಾಗಿ ರಾಜ್ಯದ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಮೂರು ದಿನಗಳ ಕಾಲ ಮಳೆ ನಿರೀಕ್ಷಿಸಬಹುದಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ವಾಯುಭಾರ ಕುಸಿತವಾಗಿ ಮಾರ್ಪಡಾಗುವ ಸಾಧ್ಯತೆಗಳಿವೆ.

ಅಲ್ಲದೆ ಬಂಗಾಳಕೊಲ್ಲಿಯಲ್ಲಿ ಟ್ರಫ್ ನಿರ್ಮಾಣ ವಾಗಿರುವುದರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕರಾವಳಿ ಹಾಗೂ ಮಳೆನಾಡು ಭಾಗದಲ್ಲಿ ಇಂದು ಸಂಜೆ ಹಾಗೂ ರಾತ್ರಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ.

ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಸಂತಸವಾಗಿದೆ. ಹಿಂಗಾರು ಬೆಳೆಗಳಿಗೆ ಈ ಮಳೆ ಅನುಕೂಲವಾಗಿದ್ದರೆ ಕೊಯ್ಲಿಗೆ ಬಂದಿದ್ದ ಮುಂಗಾರು ಬೆಳೆಗಳಿಗೆ ಹಾನಿ ಉಂಟಾಗಿದೆ.

RELATED ARTICLES

Latest News