Friday, April 4, 2025
Homeರಾಜ್ಯಹಾಸನ ಪೈನ್‌ಡ್ರೈವ್‌ ಬಹಿರಂಗ ವಿಚಾರ : ಕಾರ್ತಿಕ್‌ - ದೇವರಾಜೇಗೌಡ ನಡುವೆ ಜಟಾಪಟಿ

ಹಾಸನ ಪೈನ್‌ಡ್ರೈವ್‌ ಬಹಿರಂಗ ವಿಚಾರ : ಕಾರ್ತಿಕ್‌ – ದೇವರಾಜೇಗೌಡ ನಡುವೆ ಜಟಾಪಟಿ

ಬೆಂಗಳೂರು, ಏ.30- ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಮತ್ತು ಪೋಟೊಗಳನ್ನು ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೇನೆ ಹೊರತು ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಪ್ರಜ್ವಲ್‌ ಅವರ ಕಾರಿನ ಮಾಜಿ ಚಾಲಕ ಕಾರ್ತಿಕ್‌ ಅವರು ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್‌ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ತುಣುಕು ಮಾಧ್ಯಮಕ್ಕೆ ಲಭ್ಯವಾಗಿದೆ.

ನಾನು ಕಾಂಗ್ರೆಸ್‌ನವರಿಗೆ ಕೊಡುವುದಾಗಿದ್ದರೆ ದೇವರಾಜೇಗೌಡರ ಬಳಿ ಏಕೆ ಹೋಗುತ್ತಿದ್ದೆ. ಇವರಿಗೆ ಬಿಟ್ಟರೇ ವಿಡಿಯೋದ ಒಂದು ತುಣುಕನ್ನು ಯಾರಿಗೂ ಕೊಟ್ಟಿಲ್ಲ. ವಿನಾಕಾರಣ ಕಾಂಗ್ರೆಸ್‌ನವರ ಹೆಸರನ್ನು ಬೆರಸಬೇಡಿ ಎಂದು ಕಾರ್ತಿಕ್‌ ವಿಡಿಯೋದಲ್ಲಿ ಹೇಳಿದ್ದಾರೆ.

15 ವರ್ಷದಿಂದ ಪ್ರಜ್ವಲ್‌ ಹಾಗೂ ಅವರ ಕುಟುಂಬದ ಕಾರು ಚಾಲಕನಾಗಿ ನಾನು ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಜಮೀನನ್ನು ಬರೆಸಿಕೊಂಡು ನನ್ನ ಹಾಗೂ ನನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಹಿಂಸೆ ಕೊಟ್ಟರು. ಹಾಗಾಗಿ ನಾನು ಒಂದು ವರ್ಷದಿಂದೀಚೆಗೆ ಕೆಲಸ ಬಿಟ್ಟು ಅವರ ಮನೆಯಿಂದ ಹೊರ ಬಂದೆ.

ಆ ಸಂದರ್ಭದಲ್ಲಿ ನನಗೆ ಯಾರೂ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಬಳಿ ಹೋಗಿ ತನಗಾದ ಅನ್ಯಾಯವನ್ನು ವಿವರಿಸಿದೆ. ಅದೇ ಸಂದರ್ಭದಲ್ಲಿ ದೇವರಾಜೇಗೌಡ ಅವರು ಪ್ರಜ್ವಲ್‌ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದರು.

ನಿನ್ನ ಬಳಿ ಇರುವ ವಿಡಿಯೋ ಮತ್ತು ಪೋಟೊಗಳನ್ನು ನನಗೆ ಕೊಡು, ನಾನು ಯಾರಿಗೂ ತೋರಿಸುವುದಿಲ್ಲ ಎಂದು ಭರವಸೆ ನೀಡಿದ್ದರಿಂದ ಅವರ ಮಾತನ್ನು ನಂಬಿ ನನ್ನ ಬಳಿ ಇದ್ದ ವಿಡಿಯೋದ ಒಂದು ಕಾಪಿಯನ್ನು ಅವರಿಗೆ ಕೊಟ್ಟೆ. ಆದರೆ ಅವರು ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಯಾರು ಪೆನ್‌ಡ್ರೈವ್‌ ಹಂಚಿದ್ದಾರೋ ಎಂಬುದು ನನಗೆ ಗೊತ್ತಿಲ್ಲ. ವಿನಾಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಎಲ್ಲಾ ವಿಚಾರವನ್ನು ಎಸ್‌ಐಟಿ ಮುಂದೆ ಹಾಜರಾಗಿ ಹೇಳುತ್ತೇನೆ ಎಂದು ಅವರು ವಿಡಿಯೋ ತುಣುಕಿನಲ್ಲಿ ತಿಳಿಸಿದ್ದಾರೆ.

`ಕೈ’ ಮುಖಂಡರಿಗೆ ತಲುಪಿವೆ
ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿರುವ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರು, ಪೆನ್‌ಡ್ರೈವ್‌ ಎಲ್ಲಿಂದ ಎಲ್ಲಿಗೆ ಹೋಗಿವೆ ಎಂಬ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು. ನಾನು 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದೆ. ಜಿಲ್ಲೆಯ ಜವಾಬ್ದಾರಿಯುತ ಬಿಜೆಪಿ ಮುಖಂಡ ಆಗಿದ್ದೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿನ ಅಕ್ರಮಗಳ ವಿರುದ್ಧ ಪ್ರಜ್ವಲ್‌ ರೇವಣ್ಣ, ಹೆಚ್‌.ಡಿ.ರೇವಣ್ಣ, ಸೂರಜ್‌ ರೇವಣ್ಣ, ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆದ್ದಿದ್ದೇನೆ. ಇಷ್ಟು ಮಂದಿ ಅನರ್ಹಗೊಂಡಿ ದ್ದಾರೆ. ಮೇಲ್ಮನವಿಯ ಮೂಲಕ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ ಎಂದು ವಿವರಿಸಿದ್ದರು.

ಈಗ ಪೆನ್‌ಡ್ರೈವ್‌ನಲ್ಲಿನ ವಿಡಿಯೋಗಳು ಬಹಿರಂಗವಾಗಿರುವುದರ ಹಿಂದೆ ನನ್ನ ಪಾತ್ರ ಇಲ್ಲ. ವಿಡಿಯೋಗಳು ಬಹಿರಂಗಗೊಳಿಸದಂತೆ ಪ್ರಜ್ವಲ್‌ ರೇವಣ್ಣ ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆ ಪ್ರಕರಣದಲ್ಲಿ ಕಾರು ಚಾಲಕ ಕಾರ್ತಿಕ್‌ 86ನೇ ಪ್ರತಿವಾದಿಯಾಗಿದ್ದರು. ಆತ ನನ್ನ ಬಳಿ ಬಂದು ವಕಾಲತ್ತು ವಹಿಸುವಂತೆ ಮನವಿ ಮಾಡಿದ್ದ. ಆ ವೇಳೆ ಕಕ್ಷಿದಾರನ ಪರವಾಗಿ ವಾದ ಮಂಡಿಸಬೇಕಾಗಿದ್ದರಿಂದ ಪೆನ್‌ಡ್ರೈವ್‌ನಲ್ಲಿ ಏನಿದೆ ಎಂದು ಕೇಳಿದ್ದೆ.

ಈ ವಿಡಿಯೋಗಳು ಬೇರೆ ಯಾರಿಗಾದರೂ ನೀಡಲಾಗಿದೆಯೇ ಎಂದು ನಾನು ಕೇಳಿದಾಗ ಕಾರ್ತಿಕ್‌ ನನಗೆ ಇವನ್ನು ನನ್ನ ಸ್ನೇಹಿತ ನೀಡಿದ್ದಾನೆ. ಇವು ಕಾಂಗ್ರೆಸ್‌ ಅಧ್ಯಕ್ಷರಿಗೆ ಮತ್ತು ಇತರ ಮುಖಂಡರಿಗೆ ತಲುಪಿವೆ ಎಂದು ಕಾರ್ತಿಕ್‌ ತಿಳಿಸಿದ್ದ ಎಂದು ದೇವರಾಜೇಗೌಡ ಹೇಳಿದ್ದಾರೆ. ಜೆಡಿಎಸ್‌-ಬಿಜೆಪಿ ಮೈತ್ರಿಯಾಗುವಾಗ ನಾನು ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗುವ ವ್ಯಕ್ತಿ ವಿರುದ್ಧ ಈ ರೀತಿಯ ವಿಡಿಯೋಗಳಿವೆ ಎಂದು ಬಿಜೆಪಿ ಹೈಕಮಾಂಡ್‌ ನಾಯಕರಿಗೆ ಇ-ಮೇಲ್‌ ಕಳುಹಿಸಿದ್ದೆ, ಅವು ತಲುಪಿರಲಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಂಪೂರ್ಣ ಮಾಹಿತಿಯ ಪತ್ರ ಬರೆದು, ಅವರ ಕಚೇರಿಯಲ್ಲಿ ಇಟ್ಟು ಬಂದಿದ್ದೆ. ಅದನ್ನು ಅವರು ಓದಿರಲಿಲ್ಲ. ವಾಟ್‌್ಸಅಪ್‌ನಲ್ಲೂ ಕಳುಹಿಸಿದ್ದೆ, ಬ್ಲೂಟಿಕ್‌ ಆಗಿತ್ತು. ಆದರೆ ಆ ಸಂದೇಶವನ್ನು ವಿಜಯೇಂದ್ರ ಓದಿರಲಿಲ್ಲ ಎಂದು ಗೋತ್ತಾಗಿದೆ ಎಂದಿದ್ದಾರೆ. ಪೆನ್‌ಡ್ರೈವ್‌ ವಿಡಿಯೋದಲ್ಲಿ ಬಹಳಷ್ಟು ಹೆಣ್ಣು ಮಕ್ಕಳ ಜೀವನ ಅಡಗಿದೆ, ಅದನ್ನು ಬಯಲು ಮಾಡಿ ಅವರ ಘನತೆಗೆ ಧಕ್ಕೆ ತರುವ ಹೀನ ರಾಜಕಾರಣ ನಾನು ಮಾಡುವುದಿಲ್ಲ. ಒಂದು ವೇಳೆ ಆ ರೀತಿ ಮಾಡುವುದಿದ್ದರೆ ನಾನು ಪತ್ರ ಬಿಜೆಪಿ ವರಿಷ್ಠರಿಗೆ ಪತ್ರ ಬರೆಯುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಆಗಲೇ ವಿಡಿಯೋ ಬಹಿರಂಗ ಮಾಡಿದ್ದರೆ ಪ್ರಜ್ವಲ್‌ಗೆ ಟಿಕೆಟ್‌ ಸಿಗುತ್ತಿರಲಿಲ್ಲ ಎಂದು ಹೇಳಿದರು.

ರಾಜಕಾರಣಕ್ಕಾಗಿ ಪ್ರಭಾವಿಗಳು ಕಿಡಿಗೇಡಿಗಳ ಕೈಗೆ ಪೆನ್‌ಡ್ರೈವ್‌ ನೀಡಿ, ಹಾದಿ ಬೀದಿಯಲ್ಲಿ ಸಿಗುವಂತೆ ಮಾಡಿದ್ದಾರೆ. ವಿಡಿಯೋದಲ್ಲಿ ಇರುವುದು ಅತ್ಯಾಚಾರವಲ್ಲ, ಒಪ್ಪಿತ ಕ್ರಿಯೆ. ವಿಡಿಯೋದಲ್ಲಿರುವ ಒಬ್ಬ ಮಹಿಳೆ ತಮ್ಮ ಮೇಲೆ ಒಂಬತ್ತು ವರ್ಷಗಳ ಹಿಂದೆ ಅತ್ಯಾಚಾರ ಆಗಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ಏಕೆ ಸುಮ್ಮನಿದ್ದರು ದೇವರಾಜೇಗೌಡ ಪ್ರಶ್ನಿಸಿದರು.

RELATED ARTICLES

Latest News