Friday, November 22, 2024
Homeರಾಜ್ಯಆ.27ರಂದೇ ಕೆಎಎಸ್ ಪರೀಕ್ಷೆ : ಹಠಕ್ಕೆ ಬಿದ್ದ ಸರ್ಕಾರ

ಆ.27ರಂದೇ ಕೆಎಎಸ್ ಪರೀಕ್ಷೆ : ಹಠಕ್ಕೆ ಬಿದ್ದ ಸರ್ಕಾರ

KAS exam on August 27:

ಬೆಂಗಳೂರು,ಆ.25- ಕರ್ನಾಟಕ ಗೆಜಿಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಿಗದಿಯಾಗಿರುವ ಪರೀಕ್ಷೆಯ ವಿಚಾರದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಪ್ರತಿಭಟನೆಗಳಿಗೆ ಜಗ್ಗದೆ ಆ.27ರಂದೇ ಪ್ರಿಲಿಮ್ಸ್ ಪರೀಕ್ಷೆ ನಡೆಸುವುದಾಗಿ ಕೆಪಿಎಸ್ಸಿ ಹಾಗೂ ಸರ್ಕಾರ ಹಠಕ್ಕೆ ಬಿದ್ದಿವೆ.

ನಗರದ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಕೆಲವರು ಕೆಎಎಸ್ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು. ಕನಿಷ್ಠ ಮೂರು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆಯ ಜೊತೆಗೆ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ ವಾಟ್ಸಪ್ ಸಂದೇಶಗಳನ್ನು ಕರೆಸಿ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದಾರೆ. ಸಾವಿರಾರು ಆಕಾಂಕ್ಷಿಗಳು ಸಚಿವರ, ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಏಕಕಾಲಕ್ಕೆ ಸಂದೇಶ ರವಾನಿಸಿದ್ದಾರೆ.

ಇದರಿಂದ ನಿದ್ದೆ ಮಾಡಲು ಆಗದೆ ಬಹಳಷ್ಟು ಮಂದಿ ಸಚಿವರು, ಅಧಿಕಾರಿಗಳು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ಕೆಲವರು ಲ್ಯಾಂಡ್ಲೈನ್ಗಳ ನಂಬರ್ಗಳಿಗೂ ನಿರಂತರವಾಗಿ ಕರೆ ಮಾಡಿದ್ದಾರೆ. ಏಕಾಏಕಿ ಈ ರೀತಿಯ ದೂರವಾಣಿ ಕರೆಗಳನ್ನು ಸಹಿಸಲಾಗದೆ ಅಧಿಕಾರಿಗಳು, ಸಚಿವರು ಹೈರಾಣರಾಗಿದ್ದಾರೆ.ಪರೀಕ್ಷೆ ಮುಂದೂಡಬೇಕೆಂಬುದು ಆಕಾಂಕ್ಷಿಗಳ ಒತ್ತಾಯವಾಗಿದ್ದರೆ ಅದಕ್ಕೆ ಕ್ಯಾರೆ ಎನ್ನದೆ ನಿಗದಿತ ಅವಧಿಯಲ್ಲೇ ಪರೀಕ್ಷೆ ನಡೆಸಲಿದೆ ಎಂದು ಸರ್ಕಾರ ಸಡ್ಡು ಹೊಡೆದಿದೆ.

ಲೋಕಸೇವಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಸರ್ಕಾರದ ಸಲಹೆ ಆಧರಿಸಿ ಪರೀಕ್ಷಾ ಪ್ರಕ್ರಿಯೆಗಳನ್ನು ನಡೆಸುತ್ತದೆ. ಈ ಹಿಂದೆ ಹಲವಾರು ಪರೀಕ್ಷೆಗಳಲ್ಲಿ ಹಗರಣಗಳು, ಪ್ರಶ್ನೆ ಪತ್ರಿಕೆ ಸೋರಿಕೆ, ಸ್ವಜನ ಪಕ್ಷಪಾತ ಸೇರಿ ನಾನಾ ಅದ್ವಾನಗಳು ನಡೆದಿದ್ದವು. ಪಿಎಸ್ಐ ಪರೀಕ್ಷೆಯಂತೂ ಒಂದು ಸರ್ಕಾರದ ಭವಿಷ್ಯವನ್ನೇ ನಿರ್ಧಾರ ಮಾಡುವಷ್ಟು ಸದ್ದು ಮಾಡಿತ್ತು. ಅದಕ್ಕೂ ಮೊದಲು ಕೆಎಎಸ್ ಪರೀಕ್ಷೆಗಳು ಗೊಂದಲಕ್ಕೊಳಗಾಗಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ತೂಗುಯ್ಯಾಲೆಯಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸಂಸತ್ ಹಾಗೂ ರಾಜ್ಯ ವಿಧಾನಮಂಡಲದಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಮಸೂದೆಗಳನ್ನು ರೂಪಿಸಲಾಗಿದೆ. ಹೀಗಾಗಿ ಯಾವುದೇ ಅಕ್ರಮಗಳು ನಡೆದರೂ ಕಠಿಣ ಶಿಕ್ಷೆ ವಿಧಿಸುವ ನಿಯಮಾವಳಿಗಳು ಚಾಲ್ತಿಯಲ್ಲಿವೆ.

ಕೆಎಎಸ್ ಪರೀಕ್ಷೆ ಪಾರದರ್ಶಕವಾಗಿ ನಡೆಯಲಿದೆ ಎಂದು ಸರ್ಕಾರ ಮತ್ತು ಕೆಪಿಎಸ್ಸಿ ಪದೇ ಪದೇ ಪ್ರತಿಪಾದಿಸುತ್ತಿದೆ. ಆದರೆ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳು ಎರಡು ತಿಂಗಳ ಮೊದಲೇ ಕೆಎಎಸ್ಗೆ ಪ್ರಶ್ನೆ ಪತ್ರಿಕೆ ಸಿದ್ದಗೊಳಿಸಲಾಗಿದೆ. ಬಹುಶಃ ಅದು ಸೋರಿಕೆಯಾಗಿರಬಹುದು ಅಥವಾ ತಮ ಕಡೆಯವರಿಗೆ ಪತ್ರಿಕೆಯನ್ನು ಸಂಬಂಧಪಟ್ಟವರು ತಲುಪಿಸಿರಬಹುದು ಎಂದು ದೂರುಗಳು ಕೇಳಿಬಂದಿವೆ.

ಈ ಹಿನ್ನಲೆಯಲ್ಲಿ ಆ.27ರಂದು ನಡೆಯಲಿರುವ ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸರ್ಕಾರ ಮತ್ತು ಅಭ್ಯರ್ಥಿಗಳ ನಡುವೆ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಲಾಗಿತ್ತು. ರಾಜ್ಯದಲ್ಲೂ ಅದೇ ರೀತಿಯ ನಿರ್ಧಾರಗಳಾಗಬಹುದು ಎಂಬ ಅಂದಾಜು ತಲೆಕೆಳಗಾಗಿದೆ.

ಪ್ರತಿಭಟನೆಗೆ ಮಣಿದು ಕೃಷ್ಣ ಜನಾಷ್ಟಮಿಯಂದು ನಡೆಯುವ ಒಂದು ವಿಷಯದ ಪರೀಕ್ಷೆಗೆ ಮಾತ್ರ ಬೇರೆ ದಿನ ಸಮಯ ನಿಗದಿಪಡಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ, ಉಳಿದಂತೆ ಪರೀಕ್ಷೆಗಳು ಯಥಾರೀತಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆಎಎಸ್‌‍ ಪರೀಕ್ಷೆಗೆ ಅನಗತ್ಯ ಗೊಂದಲ : ಅತೀಕ್‌ ಬೇಸರ
ಬೆಂಗಳೂರು,ಆ.25-ಕೆಎಎಸ್‌‍ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆದಿದ್ದು, ಕೆಲವೇ ಕೆಲವು ಅಭ್ಯರ್ಥಿಗಳ ಗುಂಪು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಪರೀಕ್ಷೆಯ ಆಕಾಂಕ್ಷಿಗಳ ಸಣ್ಣ ಗುಂಪು ಆ.27ಕ್ಕೆ ನಿಗದಿಯಾಗಿರುವ ಪರೀಕ್ಷೆಯನ್ನು ಮುಂದೂಡಿಸುವ ಲಾಬಿ ನಡೆಸುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಈ ವಿಚಾರವಾಗಿ ಒತ್ತಡದ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಕೆಪಿಎಸ್‌‍ಸಿಯ ಮುಖ್ಯ ಅಧಿಕಾರಿಗಳು, ಡಿಪಿಎಆರ್‌ ಮತ್ತು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ ವಾಟ್ಸಪ್‌ ಸಂದೇಶಗಳ ಸುರಿಮಳೆಗೈಯ್ಯಲಾಗಿದೆ.

ಅಸಂಖ್ಯ ಪ್ರಮಾಣದ ಸಂದೇಶಗಳು ಹರಿದುಬಂದಿದ್ದರಿಂದಾಗಿ ಅನಿವಾರ್ಯವಾಗಿ ನಾನು ನನ್ನ ಮೊಬೈಲ್‌ನ್ನು ಏರ್‌ಪ್ಲೇನ್‌ ಮೋಡ್‌ಗೆ ಹಾಕುವಂತಹ ಪರಿಸ್ಥಿತಿ ಬಂದಿತ್ತು ಎಂದು ವಿವರಿಸಿದ್ದಾರೆ. ಪರೀಕ್ಷೆ ಮುಂದೂಡಿಸಬೇಕೆಂದು ಪ್ರಯತ್ನಿಸುತ್ತಿರುವ ಗುಂಪು ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಹಗರಣ ನಡೆದಿದೆ ಎಂದು ತಪ್ಪು ಮಾಹಿತಿ ಹರಡುವ ಪ್ರಯತ್ನ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಅಥವಾ ಕೆಪಿಎಸ್‌‍ಸಿ ಸರಿಸುಮಾರು ಒಂದೂವರೆ ಸಾವಿದಷ್ಟಿರುವ ಈ ಗುಂಪಿನ ಲಾಬಿಗೆ ಮಣಿದರೆ, ನಿರಂತರವಾಗಿ ಪರಿಶ್ರಮಪಟ್ಟು ನ್ಯಾಯಾಯಕ್ಕಾಗಿ ಎದುರು ನೋಡುತ್ತಿರುವ ಎರಡೂವರೆ ಲಕ್ಷ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎಂದು ವಿವರಿಸಿದ್ದಾರೆ.

ಪರೀಕ್ಷೆ ಬರೆಯಲು ನೈಜವಾಗಿ ತಯಾರಿ ನಡೆಸಿದವರು ಈಗಾಗಲೇ ಕೇಂದ್ರಗಳಿಗೆ ತೆರಳಲು ಟಿಕೆಟ್‌ ಬುಕ್‌ ಮಾಡಿಕೊಂಡು ಸಜ್ಜುಗೊಂಡಿದ್ದಾರೆ. ವಯೋಮಿತಿ ಸಡಿಲಿಕೆಯಿಂದಾಗಿ ಹೆಚ್ಚುವರಿ ಅವಕಾಶ ಪಡೆದಿರುವವರು ಪರೀಕ್ಷೆ ಮುಂದೂಡಿಕೆಯಾದರೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಎಲ್‌.ಕೆ.ಅತೀಕ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಜೊತೆಯಲ್ಲಿ ಪರೀಕ್ಷೆಗಳು ಪದೇ ಪದೇ ಮುಂದೂಡಿಕೆ ಆಗುತ್ತಿರುವುದರ ವಾಸ್ತಾಂಶಗಳನ್ನು ವಿವರಿಸಿದ್ದಾರೆ. ಈ ಮೊದಲು ಫೆ.26ರಂದು ಪ್ರಿಲಿಮ್ಸೌ ಪರೀಕ್ಷೆಯನ್ನು ಮೇ 5ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಬಳಿಕ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ 2ನೇ ಬಾರಿಗೆ ಜು.7ಕ್ಕೆ ನಿಗದಿಯಾಯಿತು.

ಆ ವೇಳೆಗೆ ಯುಪಿಎಸ್‌‍ಸಿ ಪರೀಕ್ಷೆ ಎದುರಾಗಿದ್ದರಿಂದ ಜು.21ಕ್ಕೆ ದಿನಾಂಕವನ್ನು ಮರುಪರಿಷ್ಕರಿಸಲಾಯಿತು. ಈ ಕುರಿತು ಜೂ.21ಕ್ಕೆ ದಿನಾಂಕ ಘೋಷಿಸಿದಾಗ 2017-18ರ ಸಾಲಿನ ಅಭ್ಯರ್ಥಿಗಳು ಹೆಚ್ಚುವರಿ ಅವಕಾಶ ಪಡೆಯಲು ವಯೋಮಿತಿಯ ಗರಿಷ್ಠ ಸಡಿಲಿಕೆಯನ್ನು ಕಳೆದುಕೊಂಡಿದ್ದರು.

ಅವರಿಗೆ ಅನುಕೂಲ ಮಾಡಿಕೊಡಲು ಸಾಫ್ಟ್ ವೇರ್‌ನಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡಬೇಕಾಯಿತು. ಜುಲೈ 6ಕ್ಕೆ ಇದು ಪೂರ್ಣಗೊಂಡಿದ್ದು, ಜು.21ಕ್ಕೆ 1560 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದವು. ಇದರಿಂದಾಗಿ ಆ.25ಕ್ಕೆ ಮೂರನೇ ಬಾರಿಗೆ ದಿನಾಂಕ ನಿಗದಿಪಡಿಸಲಾಗಿತ್ತು. ಈ ನಡುವೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಐಬಿಪಿಎಸ್‌‍ ಪರೀಕ್ಷೆಗಳಿಗೆ ಜು.1ರಂದು ದಿನಾಂಕ ಘೋಷಣೆಯಾಗಿತ್ತು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಆನ್‌ಲೈನ್ನಲ್ಲೂ ಲಭ್ಯವಿರಲಿಲ್ಲ, ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ಆ.25ರ ಬದಲಾಗಿ 27ರಂದು ಪರೀಕ್ಷೆ ನಡೆಸಲು ಆ.3ರಂದು ಹೊಸ ದಿನಾಂಕವನ್ನು ಘೋಷಿಸಲಾಯಿತು ಎಂದು ಹೇಳಿದ್ದಾರೆ.

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಭಾನುವಾರಗಳಂದು ಬಿಡುವಿಲ್ಲದ ಕಾರಣ ವಾರದ ಕೆಲಸದ ದಿನವೇ ಪರೀಕ್ಷೆ ನಡೆಸಲಾಗುತ್ತಿದೆ. ಎರಡೂವರೆ ಲಕ್ಷ ವಿದ್ಯಾರ್ಥಿಗಳು ಇದಕ್ಕೆ ತಯರಾಗಿದ್ದಾರೆ. ಕಾಗದಪತ್ರಗಳ ಮುದ್ರಣಕ್ಕೆ ನಾಲ್ಕರಿಂದ 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸುದೀರ್ಘ ಕಾಲದವರೆಗೂ ಮುದ್ರಿತ ದಸ್ತವೇಜುಗಳನ್ನು ರಕ್ಷಿಸುವುದು ಸೂಕ್ತವಲ್ಲ. ಪ್ರಶ್ನೆಪತ್ರಿಕೆ ಬಹಿರಂಗದಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ವಾರದ ರಜಾ ದಿನವೇ ಪರೀಕ್ಷೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

RELATED ARTICLES

Latest News