ಬೆಂಗಳೂರು, ನ.22- ತೀವ್ರ ವಿವಾದಕ್ಕೆ ಗುರಿಯಾಗಿದ್ದ 545 ಪಿಎಸ್‍ಐಗಳ ನೇಮಕಾತಿಗೆ ಮರು ಪರೀಕ್ಷೆಯನ್ನು ಡಿಸೆಂಬರ್ 23ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. 2021ರ ಜನವರಿ 21ರಂದು ಪೊಲೀಸ್ ಇಲಾಖೆಯಿಂದ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಟಿಸಿತ್ತು. ಅದೇ ವರ್ಷದ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆದಿತ್ತು.
ಆದರೆ, ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿತ್ತು. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‍ಪಾಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಪರೀಕ್ಷಾರ್ಥಿಗಳು, ಅವರ ಕೆಲವು ಪೋಷಕರನ್ನು ತನಿಖಾ ಅಧಿಕಾರಿಗಳು ಬಂಧಿಸಿದ್ದರು.
ಮೇಲ್ನೋಟಕ್ಕೆ ಅಕ್ರಮಗಳ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪರೀಕ್ಷೆಯ ಅಧಿಸೂಚನೆಯನ್ನು ಆಗಿನ ಸರ್ಕಾರ ರದ್ದುಗೊಳಿಸಿ ಮರು ಪರೀಕ್ಷೆಗೆ ಆದೇಶಿಸಿತ್ತು. ಅದನ್ನು ಕೆಲವು ಅಭ್ಯರ್ಥಿಗಳು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
ಜ.22 ರಂದು ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ, 48 ದಿನ ಮಂಡಲೋತ್ಸವ ಆಚರಣೆ..
ಸುದೀರ್ಘ ವಿಚಾರಣೆ ನಡೆದ ಬಳಿಕ ಹೈಕೋರ್ಟ್ ಇತ್ತೀಚೆಗಷ್ಟೇ ತೀರ್ಪು ಪ್ರಕಟಿಸಿದ್ದು, ಮರು ಪರೀಕ್ಷೆಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆಗೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸಬೇಕು ಎಂಬ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರು ಪರೀಕ್ಷೆಯನ್ನು ಆಯೋಜನೆ ಮಾಡಲಾಗುತ್ತಿದೆ. ಪರೀಕ್ಷಾ ಪ್ರಾಧಿಕಾರದ ಪ್ರಕಟಣೆಯ ಪ್ರಕಾರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ನಡೆಸಲಿದೆ.
ಎನ್‌ಸಿಇಆರ್‌ಟಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಿಎಸ್‍ಐ ಮರು ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು ಪರೀಕ್ಷೆಗೂ ಅರ್ಹತೆ ಪಡೆಯುತ್ತಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.